ಎಚ್.ಡಿ.ಕೋಟೆ: ಮಿಷನ್ ಇಂದ್ರಧನುಷ್ ಕಾರ್ಯಕ್ರಮ ಮೊದಲ ಸುತ್ತು ಆ.7 ರಿಂದ 12ರವರೆಗೆ, ಎರಡನೇ ಸುತ್ತು ಸೆ. 12 ರಿಂದ 16 ಹಾಗೂ ಮೂರನೇ ಸುತ್ತು ಅ.9ರಿಂದ 14ರವರೆಗೆ ನಡೆಯಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಮಾಹಿತಿ ನೀಡಿದರು.
ಪಟ್ಟಣದ ತಾಲೂಕ ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಿಷನ್ ಇಂದ್ರಧನುಷ್ ಬ್ಲಾಕ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಯೂವಿನ್, ಮೈಕ್ರೋ ಫ್ಲಾನಿಂಗ್, ಹೆಡ್‌ಕೌಂಟ್ ಸರ್ವೇ, ಡ್ಯೂಲಿಸ್ಟ್ ತಯಾರಿ ಆಗಬೇಕಿರುವ ಹಿನ್ನೆಲೆಯಲ್ಲಿ ಈಗಾಗಲೇ ಕ್ಷೇತ್ರ ಮಟ್ಟದಲ್ಲಿ ಮನೆ ಮನೆ ಸಮೀಕ್ಷೆ ಮಾಡಲಾಗಿದೆ. ಲಸಿಕೆ ಕಾರಣಕ್ಕೆ ಬಾಕಿ ಇರುವವರ ಪಟ್ಟಿ ಸಿದ್ಧಪಡಿಸುವುದರ ಜತೆಗೆ 0 ರಿಂದ 2 ವರ್ಷ ಹಾಗೂ 2 ರಿಂದ 5 ವರ್ಷದ ಮಕ್ಕಳು ಹಾಗೂ ಒಂದೂ ಲಸಿಕೆ ಪಡೆಯದಿರುವ ಮಕ್ಕಳು, ಭಾಗಶಃ ಲಸಿಕೆ ಪಡೆದಿರುವ ಗರ್ಭಿಣಿಯರನ್ನು ನೋಂದಣಿ ಮಾಡುವ ಮೂಲಕ ಶೇ.100 ಕ್ಕೆ 100ರಷ್ಟು ಲಸಿಕೆ ಹಾಕುವುದು ಕಾರ್ಯಕ್ರಮದ ಗುರಿಯಾಗಿದೆ ಎಂದರು.
ಸಭೆಯಲ್ಲಿ ತಹಸೀಲ್ದಾರ್ ಸಣ್ಣರಾಮಪ್ಪ, ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಕೆ.ರಂಗಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ಪಿ. ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಉದಯಕುಮಾರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸೋಮಣ್ಣ, ಆರ್‌ಬಿ ಎಸ್‌ಕೆ ತಂಡದ ಡಾ.ಚೇತನ್, ಡಾ.ಹೇಮಲತಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮ್ಯಾನೇಜರ್ ರಾಧಾ, ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರೇಖಾ ಇತರರಿದ್ದರು.