ಜಿಲ್ಲೆ

ಆ.5ರಿಂದ ಮೈಸೂರು ನವೋದ್ಯಮ ಉತ್ಸವ

ಮೈಸೂರು: ಮೈಸೂರು ಸ್ಟಾರ್ಟ್‌ಅಪ್ ಪೆವಿಲಿಯನ್ (ಮೈಸೂರು ನವೋದ್ಯಮ ಉತ್ಸವ) ಹಾಗೂ ಸಮ್ಮೇಳನವನ್ನು ಆ.5ರಿಂದ 7ರವರೆಗೆ ನಗರದ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ಫುಟ್‌ಬಾಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ಎಸ್‌ಜೆಸಿಇ ಸ್ಟೆಪ್, ಟಿಐಇ ಮೈಸೂರು, ಯಂಗ್ ಇಂಡಿಯನ್ಸ್, ಸಿಐಐ, ಕರ್ನಾಟಕ ಡಿಜಿಟಲ್, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಕರ್ನಾಟಕ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮೈಸೂರಿನಂತಹ 2ನೇ ಹಂತದ ನಗರಗಳಲ್ಲೂ ನವೋದ್ಯಮದ ಅಭಿವೃದ್ಧಿಪಡಿಸುವ ಉದ್ದೇಶದಿಂದ ಉತ್ಸವ ಆಯೋಜಿಸಲಾಗಿದೆ ಎಂದು ಎಸ್‌ಜೆಸಿಇ ಸ್ಟೆಪ್ ಸಿಇಒ ಶಿವಶಂಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆ.5ರಂದು ಬೆಳಗ್ಗೆ 10.05ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮೈಸೂರಿನ ಕೈಗಾರಿಕೆ ಹಾಗೂ ವಾಣಿಜ್ಯ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದರು.

20ಕ್ಕೂ ಹೆಚ್ಚು ಹೂಡಿಕೆದಾರರು, ಮೆಂಟರ್‌ಗಳು, 25ಕ್ಕೂ ಹೆಚ್ಚು ಭಾಷಣಕಾರರು ಪಾಲ್ಗೊಳ್ಳಲಿದ್ದಾರೆ. 100ಕ್ಕೂ ಹೆಚ್ಚು ಮಳಿಗೆಗಳು ಮತ್ತು 15 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ಸಂಶೋಧಕರು, ಕೈಗಾರಿಕಾ ವೃತ್ತಿಪರರು ಮೊದಲಾದವರು ಭಾಗವಹಿಸಲಿದ್ದಾರೆ. ಒಂದು ಸ್ಥಳ, ಹಲವು ಅವಕಾಶಗಳು ಮತ್ತು ನವೋದ್ಯಮದಿಂದ ನವಭಾರತ ಘೋಷವಾಕ್ಯದಲ್ಲಿ ಸಮ್ಮೇಳನ ನಡೆಸಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಮೈಸೂರಿನಲ್ಲಿ ನವೋದ್ಯಮ ಆರಂಭಿಸಲು ಇರುವ ಅವಕಾಶಗಳ ಕುರಿತು ಮಾಹಿತಿ, ಚರ್ಚೆ ಮತ್ತು ಸಂವಾದ ನಡೆಯಲಿದೆ. ಮಾಹಿತಿಗಾಗಿ ಮೊ: 94481 54063 ಸಂಪರ್ಕಿಸಬಹುದು ಎಂದರು.