ಜಿಲ್ಲೆ

ಆ.31ರಿಂದ ನಗರದಲ್ಲಿ ಸಂವಿಧಾನ ಓದು ಅಧ್ಯಯನ ಶಿಬಿರ

ಹಾಸನ: ಸಾರ್ವಜನಿಕರಲ್ಲಿ ಸಂವಿಧಾನ ಸಾಕ್ಷರತೆ ಮೂಡಿಸುವ ದೃಷ್ಟಿಯಿಂದ ನ್ಯಾ.ಎಚ್ ಎನ್ ನಾಗಮೋಹನ್ ದಾಸ್ ಅವರು ರಚಿಸಿರುವ ಸಂವಿಧಾನ ಓದು ಅಭಿಯಾನ ಕಾರ್ಯಕ್ರಮವನ್ನು ಆಗಸ್ಟ್ 31ರಿಂದ ಎರಡು ದಿನಗಳ ಕಾಲ ನಗರದ ಜಿಲ್ಲಾ ಕ್ರೀಡಾಂಗಣದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ಸಂಯೋಜಕ ಬಿ. ರಾಜಶೇಖರ್ ಮೂರ್ತಿ ತಿಳಿಸಿದರು.
ಈ ಎರಡು ದಿನಗಳ ಕಾಲದ ಅಭಿಯಾನದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಜನಪ್ರತಿನಿಧಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಹಾಗೂ ಪ್ರಗತಿಪರ ಆಶಯವುಳ್ಳ 150ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಭಿಯಾನ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಡೆದಿದೆ. ನಮ್ಮ ಜಿಲ್ಲೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ. ಸಾಮಾಜಿಕ ಹೋರಾಟಗಾರ ಕೆ.ವೆಂಕಟೇಶ್ ಮೂರ್ತಿ ಅವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಹಲವು ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಸೆ.1ರಂದು ಸಂಜೆ 4 ಗಂಟೆಗೆ ಸಮಾರೋಪ ಮತ್ತು ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದ್ದು ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಬೀರ್ ಅಹ್ಮದ್ ಮುಲ್ಲಾ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕಾರ್ಯದರ್ಶಿ ಎನ್.ಆರ್. ವಿಶುಕುಮಾರ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.