ಉಚಿತ ಸಾಮೂಹಿಕ ವಿವಾಹದ ಪ್ರಕಟಣೆಯ ಪ್ರತಿ. 
ಜಿಲ್ಲೆ

ಆ.21ಕ್ಕೆ ಉಚಿತ ಸಾಮೂಹಿಕ ವಿವಾಹ ಆಯೋಜನೆ

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಗಸ್ಟ್ 21 ರಂದು ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದ್ದು, ಇಚ್ಛಿಸುವ ಆರ್ಹರು ಅರ್ಜಿ ಸಲ್ಲಿಸಬಹುದಾಗಿದೆ.

ಶ್ರೀ ಮಹದೇಶ್ವರರು ನೆಲೆಸಿರುವ ಮ.ಬೆಟ್ಟ ಲಕ್ಷಾಂತರ ಭಕ್ತರು ಭೇಟಿ ನೀಡುವ ಪ್ರಸಿದ್ಧ ಧಾರ್ಮಿಕ ಪುಣ್ಯಸ್ಥಳ. ಹಾಗಾಗಿ ಇಲ್ಲಿ ವಿವಾಹವಾದರೆ ಜೀವನ ಅನ್ಯೋನ್ಯವಾಗಿರುತ್ತದೆ ಎಂದು ಜನರ ಹಾಗೂ ಭಕ್ತರ ನಂಬಿಕೆ. ಈ ನಿಟ್ಟಿನಲ್ಲಿ ಹಿಂದೆ ಬಡ ವರ್ಗದ ಜನರು ಹೆಚ್ಚಾಗಿ ಸರಳವಾಗಿ ವಿವಾಹವಾಗುತ್ತಿದ್ದರು. ಇದನ್ನು ಮನಗಂಡ ಮುಜರಾಯಿ ಇಲಾಖೆ 1989 ರಿಂದ ಪ್ರತಿವರ್ಷ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸುತ್ತಿತ್ತು. ಬಳಿಕ 2014 ರಿಂದ ಪ್ರಾಧಿಕಾರ ಇದನ್ನು ಮುಂದುವರಿಸಿಕೊಂಡು ಬರುತ್ತಿದ್ದು, ಈ ವರ್ಷ ಶ್ರಾವಣ ಮಾಸದ ಆ.21 ರಂದು ಬೆಳಗ್ಗೆ 10.05 ರಿಂದ 10.40 ರೊಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಉಚಿತ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿದೆ. ವಿವಾಹವಾಗಲು ಬಯಸುವವರು ಇದರ ಪ್ರಯೋಜನ ಪಡೆದುಕೊಳ್ಳುವ ಸಲುವಾಗಿ ಪ್ರಾಧಿಕಾರ ಈಗಾಗಲೇ ಪ್ರಚಾರ ಸಮಿತಿಯನ್ನು ರಚಿಸಿದ್ದು, ಚಾ.ನಗರ ಸೇರಿದಂತೆ ಮೈಸೂರು, ಮಂಡ್ಯ, ರಾಮನಗರ, ಕನಕಪುರ, ತುಮಕೂರು, ಬಿಡದಿ, ಬೆಂಗಳೂರು ಗ್ರಾಮಾಂತರ ಹಾಗೂ ಇನ್ನಿತರ ಕಡೆಗಳಲ್ಲಿ ಪ್ರಚಾರ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಅರ್ಜಿ ಸಲ್ಲಿಸಲು ಜು.25 ಕೊನೇ ದಿನ. ವಿವಾಹವಾಗಲು ಇಚ್ಛಿಸುವವರು ಕಾರ್ಯದರ್ಶಿ, ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಅರ್ಜಿ ಪಡೆದು ಭರ್ತಿ ಮಾಡಿ ಹೆಸರು, ವಿಳಾಸ ಹಾಗೂ ಅಗತ್ಯ ದಾಖಲೆಗಳೊಂದಿಗೆ ಜುಲೈ 25 ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು. ಬಾಲ್ಯವಿವಾಹ ಹಾಗೂ 2ನೇ ಮದುವೆಗೆ ಅವಕಾಶವಿರುವುದಿಲ್ಲ. ವಿವಾಹ ಬಯಸುವ ವರನಿಗೆ 21 ವರ್ಷ, ವಧುವಿಗೆ 18 ವರ್ಷ ಪೂರ್ಣಗೊಂಡಿರಬೇಕು. ಈ ಸಂಬಂಧ ಶಾಲಾ ದಾಖಲಾತಿ ಪತ್ರ ಇಲ್ಲವೇ ಮೂಳೆ ತಜ್ಞರಿಂದ ಪಡೆದ ದೃಢೀಕರಣ ಪತ್ರ ಸಲ್ಲಿಸಬೇಕು.

ವಧು ವರರ 3 ಜೋಡಿ ಭಾವಚಿತ್ರ ಲಗತ್ತಿಸಬೇಕು. ವಧು-ವರನ ಜಾತಿಯ ಬಗ್ಗೆ ತಹಸೀಲ್ದಾರರ ದೃಢೀಕರಣ ಪ್ರಮಾಣ ಪತ್ರ, ಆಧಾರ್ ಕಾರ್ಡ್, ವಾಸಸ್ಥಳ ದೃಢೀಕರಣ ಪತ್ರ, ಈ ಹಿಂದೆ ಮದುವೆ ಆಗಿರದ ಬಗ್ಗೆ ಗ್ರಾಪಂ ಅಥವಾ ಸ್ಥಳೀಯ ಸಂಸ್ಥೆಗಳಿಂದ ರುಜುವಾತು ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ವಧುವಿಗೆ ಚಿನ್ನದ ಮಾಂಗಲ್ಯ, ಬೆಳ್ಳಿ ಕಾಲುಂಗುರ, ಸೀರೆ, ರವಿಕೆ, ವರನಿಗೆ ಪಂಚೆ, ಶರ್ಟ್ ಹಾಗೂ ಟವಲ್‌ಅನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.