ಚಾಮರಾಜನಗರ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಆ.16 ರಂದು ಮಾಜಿ ಶಾಸಕ ಎಂ.ಸಿ.ಬಸಪ್ಪ ಅವರ ಜನ್ಮ ಶತಮಾನೋತ್ಸವ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಆರ್.ಮಲ್ಲಿಕಾರ್ಜುನಪ್ಪ ತಿಳಿಸಿದರು.
ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಬೆಳಗ್ಗೆ 10.30 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಪಡಗೂರು ಅಡವಿಮಠದ ಶ್ರೀ ಶಿವಲಿಂಗೈಂದ್ರಸ್ವಾಮಿ ಸಾನಿಧ್ಯವನ್ನು ವಹಿಸುವರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಮತ್ತು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಉದ್ಘಾಟನೆ ನೆರವೇರಿಸುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹಿರಿಯ ರಂಗಕರ್ಮಿ ಮತ್ತು ಸಾಹಿತಿ ಕೆ.ವೆಂಕಟರಾಜು ಎಂ.ಸಿ.ಬಸಪ್ಪ ಅವರ ಕುರಿತು ಉಪನ್ಯಾಸ ನೀಡುವರು. ಆಧ್ಯಾತ್ಮಿಕ ಚಿಂತಕ ಶಂಕರ್ ದೇವನೂರು ಅವರು ಎಂ.ಸಿ.ಬಸಪ್ಪನವರ ರಾಜಕಾರಣ ಮತ್ತು ಸಮಾಜ ಸೇವೆ ಕುರಿತು ದತ್ತಿ ಉಪನ್ಯಾಸ ನೀಡುವರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಮಲ್ಲಿಕಾರ್ಜುನಸ್ವಾಮಿ ದುಗ್ಗಹಟ್ಟಿ ಹಾಗೂ ಗಂಗಾಂಬಿಕಾ ಎಂ.ಸಿ.ಬಸಪ್ಪ ಮತ್ತು ಕುಟುಂಬಸ್ಥರು ಹಾಜರಿರುವರು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿ.ಮಲ್ಲಿಕಾರ್ಜುನಸ್ವಾಮಿ, ರಂಗಕರ್ಮಿ ವೆಂಕಟರಾಜು, ಮುಖಂಡರಾದ ಆರ್.ಪುಟ್ಟಮಲ್ಲಪ್ಪ, ಎಂ.ಸುಂದರ್, ಕುಮಾರಸ್ವಾಮಿ, ಸೋಮಶೇಖರ್ ಹಾಜರಿದ್ದರು.
ಎಂ.ಸಿ.ಬಸಪ್ಪ ಕುರಿತ ಕೃತಿ ಬಿಡುಗಡೆ:
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಕೆ.ವೆಂಕಟರಾಜು ಅವರು ರಚಿಸಿರುವ ಸರಳ ಸಜ್ಜನ ಎಂ.ಸಿ.ಬಸಪ್ಪ ಎಂಬ ಕೃತಿಯನ್ನು ದುಗ್ಗಹಟ್ಟಿ ವೀರಭದ್ರಪ್ಪ ಪ್ರತಿಷ್ಠಾನದ ವತಿಯಿಂದ ಲೋಕಾರ್ಪಣೆಗಳಿಸಲಾಗುತ್ತಿದೆ. ಶರಣ ಸಾಹಿತ್ಯ ಪರಿಷತ್‌ನಲ್ಲಿ ಎಂ.ಸಿ.ಬಸಪ್ಪ ಅವರ ಹೆಸರಿನಲ್ಲಿ 5 ಲಕ್ಷ ರೂ, ಹಣವನ್ನು ದತ್ತಿ ಇರಿಸಿ, ವರ್ಷದಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜನೆಮಾಡಿಕೊಂಡು ಬರುವ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಎಂ.ಸಿ.ಬಸಪ್ಪ ಅವರ ತತ್ವ-ಆದರ್ಶಗಳನ್ನು ಯುವಜನಾಂಗ ಅಳವಡಿಸಿಕೊಂಡು ಸಾಗಬೇಕಾಗಿದೆ ಎಂದು ಮಲ್ಲಿಕಾರ್ಜುನಪ್ಪ ಹೇಳಿದರು.