ಮೈಸೂರು: ಕೃಷಿ ಚಟುವಟಿಕೆಗಳಿಗಾಗಿ ಕಬಿನಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ, ಆ. 14ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಸಂಕಷ್ಟ ಕಾಲದಲ್ಲೂ ಸ್ಥಳೀಯ ರೈತರನ್ನು ನಿರ್ಲಕ್ಷಿೃಸಿ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಈ ಮೂಲಕ ಕಬಿನಿ ಅಚ್ಚುಕಟ್ಟು ಭಾಗದ ರೈತರನ್ನು ಬಲಿ ಕೊಡಲಾಗುತ್ತಿದ್ದು, ಇದು ಸರಿಯಲ್ಲ. ಭತ್ತ ಇನ್ನಿತರ ಬೆಳೆಗಳನ್ನು ಬೆಳೆಯಲು ಕೂಡಲೇ ನೀರು ಹರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಕಾವೇರಿ ನ್ಯಾಯಾಧೀಕರಣ ಹಂಚಿಕೆ ಮಾಡಿರುವ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಹೆಚ್ಚುವರಿ ನೀರಿನ ಬಳಕೆಗಾಗಿ ಉದ್ದೇಶಿತ ಮೇಕೆದಾಟು ಜಲಾಶಯವನ್ನು ನಿರ್ಮಿಸಬೇಕು. ಈ ಮೂಲಕ ನೀರನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದರೆ ತಮಿಳುನಾಡಿಗೆ ಸಂಕಷ್ಟ ಕಾಲದಲ್ಲಿ ಬಿಡಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು.
ಪ್ರತಿ ಟನ್ ಕಬ್ಬಿನ 150 ರೂ. ಬಾಕಿ ಹಣವನ್ನು ರೈತರಿಗೆ ಸಕ್ಕರೆ ಕಾರ್ಖಾನೆಗಳು ಇನ್ನೂ ಕೊಟ್ಟಿಲ್ಲ. ಇದಕ್ಕಾಗಿ ಒಂದು ವಾರ ಸಮಯಾವಕಾಶ ಪಡೆದುಕೊಳ್ಳಲಾಗಿತ್ತು. ಆದಾಗ್ಯೂ ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದರೂ ರೈತರಿಗೆ ನ್ಯಾಯ ಸಿಕ್ಕಿಲ್ಲ ಎಂದು ಕಿಡಿಕಾರಿದರು.
ಶೇ. 30ರಷ್ಟು ರೈತರು ಬೇಸತ್ತು ಕಬ್ಬು ಬೆಳೆಯಿಂದಲೇ ದೂರವಾಗುತ್ತಿದ್ದಾರೆ. ಪಕ್ಕದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಬಣ್ಣಾರಿ ಅಮ್ಮನ್ ಕಾರ್ಖಾನೆಗಿಂತ ಪ್ರತಿ ಟನ್‌ಗೆ 100 ರೂ. ಹೆಚ್ಚುವರಿ ಹಣ ನೀಡಿ ಕಬ್ಬು ಖರೀದಿಸುತ್ತಿವೆ. ಆದರೆ ಮಹದೇಶ್ವರ ಹಾಗೂ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗಳಿಗೆ ಏಕೆ ಹೆಚ್ಚುವರಿ ಹಣ ನೀಡಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ಕಬ್ಬು ಕಟಾವಿನ ಕೂಲಿ ಮತ್ತು ಸಾಗಣೆ ವೆಚ್ಚವನ್ನು ಕಾರ್ಖಾನೆ ಮನಬಂದಂತೆ ಸುಲಿಗೆ ಮಾಡುತ್ತಿದೆ. ಈ ವರ್ಷ ನಿಗದಿ ಮಾಡಿರುವ ಕಟಾವು ಕೂಲಿ 450 ರೂ.ಗಿಂತ ಹೆಚ್ಚುವರಿ ತೆಗೆದುಕೊಳ್ಳಬಾರದು. ಕಬ್ಬಿನ ತೂಕದಲ್ಲೂ ರೈತರಿಗೆ ಮೋಸವಾಗುತ್ತಿದೆ. ಇದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.
ರೈತರಿಗೆ ಒಪ್ಪಂದ ಪತ್ರದ ಪ್ರತಿ ನೀಡಬೇಕು. ಒಪ್ಪಂದದ ಪ್ರಕಾರ 12 ತಿಂಗಳಿಗೆ ಕಬ್ಬನ್ನು ಕಟಾವು ಮಾಡಬೇಕು. ಕಾರ್ಖಾನೆಯವರು ವಿಳಂಬ ಮಾಡಿದರೆ ಆ ಅವಧಿಗೆ ಹೆಚ್ಚುವರಿ ಹಣ ಕೊಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಹತ್ತಿ ಬೆಳೆಗೆ ವಿಮಾ ಪರಿಹಾರ ಬಂದಿಲ್ಲ. ಕೂಡಲೇ ನಷ್ಟದ ಪರಿಹಾರ ನೀಡಬೇಕು. ಕೃಷಿ ಪಂಪಸೆಟ್‌ಗಳಿಗೆ ಹಗಲು ವೇಳೆ 12 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಸಕ್ತ ಸಾಲಿನಲ್ಲಿ ಶೇ.30ರಷ್ಟು ಕಬ್ಬು ಬೆಳೆ ಕಡಿಮೆಯಾಗಿದೆ. ಆದರೆ ಕಾರ್ಖಾನೆಗಳ ಬೇಡಿಕೆ ಹೆಚ್ಚಿದೆ. ಬೇರೆ ಜಿಲ್ಲೆಯ ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬಿಗೆ ಹೆಚ್ಚುವರಿ ಹಣ ಕೊಟ್ಟು ಖರೀದಿಸಲು ಮುಂದಾಗುತ್ತಿದ್ದಾರೆ. ರೈತರು ಕಬ್ಬು ಕಟಾವು ಮಾಡಲು ಆತುರ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಸಂಘದ ಮುಖಂಡರಾದ ಪಿ.ಸೋಮಶೇಖರ್, ಹತ್ತಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ, ವೆಂಕಟೇಶ್, ಕಮಲಮ್ಮ, ಮಂಜುನಾಥ, ಸುನಿಲ್ ಇನ್ನಿತರರಿದ್ದರು.