ಜಿಲ್ಲೆ

ಆ.13 ರಂದು ಬಲಗೈ ಸಮುದಾಯದಿಂದ ಪ್ರತಿಭಟನೆ

ಚಾಮರಾಜನಗರ: ರಾಜ್ಯ ಸರ್ಕಾರ ನ್ಯಾ.ನಾಗಮೋಹನ್ ಮೋಹನ್‌ದಾಸ್ ಅವರು ಸಲ್ಲಿಸಿರುವ ಒಳಮೀಸಲಾತಿ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಆಗ್ರಹಿಸಿ ಆ.13 ರಂದು ಪರಿಶಿಷ್ಟಜಾತಿ ಬಲಗೈ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯದ ಮುಖಂಡ ಅಯ್ಯನಪುರ ಶಿವಕುಮಾರ್ ತಿಳಿಸಿದರು.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಬೆಳಗ್ಗೆ 10.30 ಗಂಟೆಗೆ ಪ್ರಾರಂಭವಾಗಿ, ಅಲ್ಲಿಂದ ಮೆರವಣಿಗೆ ಮೂಲಕ ಸಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಪ್ರತಿಭಟನೆಯಲ್ಲಿ ಛಲವಾದಿ, ಆದಿ ಕರ್ನಾಟಕ ಇನ್ನಿತರೆ ಬಲಗೈ ಸಂಬಂಧಿತ ಜಾತಿಗಳ ಸಂಸದರು, ಶಾಸಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ನೇತೃತ್ವ ವಹಿಸಲಿದ್ದಾರೆ. ಈ ಪ್ರತಿಭಟನಾ ಮೆರವಣಿಗೆಗೆ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಪ್ರಸ್ತುತ ನ್ಯಾ.ನಾಗಮೋಹನ್ ದಾಸ್ ಸಲ್ಲಿಸಿರುವ ವರದಿಯಲ್ಲಿ ಬಲಗೈ ಸಂಬಂಧಿತ ಜಾತಿಗಳನ್ನು ಉದ್ದೇಶ ಪೂರ್ವಕವಾಗಿ ಕಡಿಮೆ ಮಾಡಲಾಗಿದೆ. ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಹಲವು ಜಾತಿಗಳನ್ನು ಶೇ.1 ರಷ್ಟು ಗುಂಪಿಗೆ ಸೇರಿಸುವ ಮೂಲಕ ಅನ್ಯಾಯ ಮಾಡಲಾಗಿದೆ. ಬಲಗೈ ಸಮುದಾಯದ ಯಾವುದೇ ಮನವಿಗಳನ್ನು ಪುರಸ್ಕರಿಸದೇ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡದೆ ಯಾವುದೋ ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿ ವರದಿಯನ್ನು ಸಲ್ಲಿಸಲಾಗಿದೆ ಎಂದು ದೂರಿದರು.

ನ್ಯಾ.ನಾಗಮೋಹನ್ ದಾಸ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ಪಕ್ಷಪಾತದಿಂದ ಕೂಡಿರುವ ವರದಿಯನ್ನು ಯಥಾವತ್ತಾಗಿ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು. ರಾಜ್ಯ ಸರ್ಕಾರ ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಿ ಮರು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಮುಖಂಡರಾದ ಶಾಂತರಾಜು, ಪುಟ್ಟರಾಜು, ಬೊಮ್ಮಯ್ಯ, ನಾಗಯ್ಯ, ನಿರಂಜನ್ ಕುಮಾರ್, ರಂಗಸ್ವಾಮಿ ಹಾಜರಿದ್ದರು.

ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಪರೈಯ್ಯ, ಪರವನ್ ಜಾತಿಯನ್ನು ಎಡಗೈ ಸಮುದಾಯಕ್ಕೆ ಸೇರಿಸಲಾಗಿದೆ. ಅದಲ್ಲದೇ ಬಲಗೈ ಸಮುದಾಯದ ಇನ್ನೂ ಹಲವಾರು ಜಾತಿಗಳನ್ನು ಉದ್ದೇಶಪೂರ್ವಕವಾಗಿ ಅತ್ಯಂತ ಹಿಂದುಳಿದ ಗುಂಪಿಗೆ ಸೇರಿಸಲಾಗಿದೆ. ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಸಮೂಹಗಳಿಗೆ ನಿಗದಿಪಡಿಸಿರುವ ಶೇ.1 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಬೇಕು.

-ನಲ್ಲೂರು ಸೋಮೇಶ್ವರ್, ಬಲಗೈ ಮುಖಂಡ, ಚಾಮರಾಜನಗರ