ಜಿಲ್ಲೆ

ಆ.10ರಂದು ಜಂತುಹುಳು ನಾಶಕ ಮಾತ್ರೆ ವಿತರಣೆ: ಡಿಸಿ ಸೆಲ್ವಮಣಿ

ಶಿವಮೊಗ್ಗ: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ನಿಮಿತ್ತ ಎಲ್ಲ ಶಾಲೆ, ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಆಗಸ್ಟ್ 10ರಂದು ಜಂತುಹುಳು ನಾಶಕ ಮಾತ್ರೆಗಳನ್ನು ಉಚಿತವಾಗಿ ನೀಡಲಿದ್ದು ಜಂತುಹುಳು ನಾಶಕ ಮಾತ್ರೆ ನೀಡುವಲ್ಲಿ ಶೇ.100 ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಿಸಿ ಕಚೇರಿಯಲ್ಲಿ ಶುಕ್ತವಾರ ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಜಂಟುಹುಳು ನಿವಾರಣಾ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 1ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳು ಜಂತುಹುಳು ನಾಶಕ ಮಾತ್ರೆಗಳನ್ನು ಪಡೆದುಕೊಳ್ಳಬೇಕು ಎಂದರು.

ಜಂತುಹುಳು ಸೋಂಕಿನಿಂದ ಮಕ್ಕಳು ರಕ್ತಹೀನತೆ, ಪೌಷ್ಟಿಕಾಂಶದ ಕೊರತೆ, ಹಸಿವಾಗದಿರುವುದು, ನಿಶಕ್ತಿ, ಏಕಾಗ್ರತೆ ಕೊರತೆ, ಆತಂಕ, ಹೊಟ್ಟೆನೋವು, ವಾಕರಿಕೆ, ವಾಂತಿ, ಅತಿಸಾರ ಮುಂತಾದ ಅಪಾಯಕಾರಿ ಸಮಸ್ಯೆಗಳಿಂದ ಬಳಲುತ್ತಾರೆ. ಈ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಆ.10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಆಚರಿಸಲಾಗುತ್ತಿದೆ. ಅಂದು ಎಲ್ಲ ಮಕ್ಕಳಿಗೆ ಉಚಿತವಾಗಿ ಅಲ್ಬೆಂಡಝೋಲ್ ಮಾತ್ರೆ ಕೊಡಲಾಗುವುದು. ಬಾಕಿ ಉಳಿದ ಮಕ್ಕಳಿಗೆ ಆ.17ರಂದು, ಅಂದು ಕೂಡ ಶೇ.100 ಪ್ರಗತಿ ಸಾಧಿಸದಿದ್ದರೆ ಮತ್ತೊಂದು ದಿನ ನಿಗದಿಪಡಿಸಲಾಗುವುದು ಎಂದರು.

5.50 ಲಕ್ಷ ಮಕ್ಕಳಿಗೆ ಮಾತ್ರೆ ನೀಡುವ ಗುರಿ: 1ರಿಂದ 2 ವರ್ಷದ ಮಕ್ಕಳಿಗೆ ಅರ್ಧ ಮತ್ತು 19 ವರ್ಷದವರೆಗಿನ ಮಕ್ಕಳಿಗೆ ಒಂದು ಜಂತುಹುಳು ನಾಶಕ ಮಾತ್ರೆಯನ್ನು ಜಗಿಯಲು ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 5.50 ಲಕ್ಷ ಮಕ್ಕಳಿಗೆ ಮಾತ್ರೆ ನೀಡುವ ಗುರಿ ನೀಡಲಾಗಿದೆ ಎಂದು ಆರ್‌ಸಿಎಚ್‌ಒ ಡಾ. ನಾಗರಾಜ ನಾಯ್ಕ ಹೇಳಿದರು. ಜಂತುಹುಳು ನಿವಾರಣೆಯಿಂದ ರಕ್ತಹೀನತೆ ನಿವಾರಿಸಬಹುದು. ಏಕಾಗ್ರತೆ, ಕಲಿಕಾ ಸಾಮರ್ಥ್ಯ ಹೆಚ್ಚುವುದರೊಂದಿಗೆ ಪರಿಸರದಲ್ಲಿ ಜಂತುಹುಳು ಕಡಿಮೆ ಮಾಡುವ ಮೂಲಕ ಸಮುದಾಯಕ್ಕೆ ಪ್ರಯೋಜನವಾಗುತ್ತದೆ. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಎಲ್ಲರೂ ಸಹಕರಿಸಬೇಕು ಎಂದರು.

ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್, ಡಿಎಚ್‌ಒ ಡಾ.ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಿದ್ದನಗೌಡ ಪಾಟಿಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ ಉಪಸ್ಥಿತರಿದ್ದರು.