ಪಾಂಡವಪುರ: ತಾಲೂಕಿನ ಬೇಬಿ ಬೆಟ್ಟದ ಶ್ರೀರಾಮ ಯೋಗೇಶ್ವರ ಮಠದಲ್ಲಿ ಲಿಂಗೈಕ್ಯ ಸದಾಶಿವ ಸ್ವಾಮೀಜಿ ಅವರ ಗದ್ದುಗೆಯನ್ನು ಆಗಸ್ಟ್ 10 ರಂದು ಉದ್ಘಾಟಿಸಲು ತೀರ್ಮಾನಿಸಲಾಯಿತು.
ಗದ್ದುಗೆ ಉದ್ಘಾಟನೆ ಸಂಬಂಧ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವ ಸ್ವಾಮೀಜಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸಭೆ ನಡೆಯಿತು. ಗದ್ದುಗೆ ಉದ್ಘಾಟನೆ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಲು ನಿರ್ಣಯಿಸಲಾಯಿತು.
ಕಾರ್ಯಕ್ರಮಕ್ಕೆ ಮೈಸೂರು ರಾಜ ವಂಶಸ್ಥ ಯದುವೀರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ, ಹಲವು ಮಠಗಳ ಮಠಾಧೀಶರು, ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಇತರರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.
ಮುಂದಿನ ದಿನಗಳಲ್ಲಿ ಮಠಕ್ಕೆ ಆದಾಯ ಕ್ರೂಢೀಕರಣ ಹಾಗೂ ಶಾಲೆ ಪ್ರಾರಂಭಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ ನೀಡಿದರು.
ಶಂಕರನಂಜಪ್ಪ, ತಾಪಂ ಮಾಜಿ ಸದಸ್ಯ ಯಾಚೇನಹಳ್ಳಿ ಸುಧಣ್ಣ, ಬೇಬಿ ಮಹೇಶ್, ಸಿದ್ದರಾಜು, ಷಡಕ್ಷರಿ, ಡಿಂಕಾ ತಮ್ಮಯ್ಯ, ಮಂಡಿಬೆಟ್ಟಹಳ್ಳಿ ಜಗದೀಶ್, ಕೆ.ಎಲ್.ಆನಂದ್, ಮಂಜು, ಶಿಂಡಭೋಗನಹಳ್ಳಿ ಸತೀಶ್ ಇತರರಿದ್ದರು. ಇದೇ ವೇಳೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಶ್ರೀ ಶಿವಬಸವ ಸ್ವಾಮೀಜಿ ಸನ್ಮಾನಿಸಿದರು.