ವಿಜಯವಾಣಿ ಸುದ್ದಿಜಾಲ, ಕುಮಟಾ
ಕಾಯಾ-ವಾಚಾ-ಮನಸಾ ಅಹಿಂಸೆಯೇ ಸನ್ಯಾಸದ ಮೂಲ ತತ್ವ. ಇದನ್ನೇ ಪಾಲಿಸುವ ಚಾತುರ್ಮಾಸ್ಯವು ಕೇವಲ ಗುರುಗಳಿಗಾಗಿ ಅಲ್ಲ. ಭಕ್ತರಿಗೂ ವಿಶೇಷವೇ ಆಗಿದೆ. ಏಕೆಂದರೆ ಚಾತುರ್ಮಾಸ್ಯದ ಸಂದರ್ಭವು ಅತ್ಯಂತ ಪುಣ್ಯತಮವೂ ವಿಶೇಷ ಫಲದಾಯಕವೂ ಆಗಿರುತ್ತದೆ ಎಂದು ಪರ್ತಗಾಳಿ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ಶ್ರೀ ಶಾಂತೇರಿ ಕಾಮಾಕ್ಷಿ ರಾಮನಾಥ ಲಕ್ಷ್ಮೀನಾರಾಯಣ ಮಂದಿರದಲ್ಲಿ ಬುಧವಾರ ಚಾತುರ್ಮಾಸ್ಯ ಸ್ವೀಕಾರದ ಬಳಿಕ ಶಿಷ್ಯರನ್ನುದ್ದೇಶಿಸಿ ಆಶೀರ್ವಚನ ಮಾಡಿದರು.
ದೇವ ಸಿದ್ಧಾಂತ ಪ್ರಶ್ನಾತೀತ, ಏಕೆಂದರೆ ಯಾವತ್ತೂ ದೇವರನ್ನು ಮೊದಲು ನಂಬಿದರೆ ಮಾತ್ರ ನಂತರದಲ್ಲಿ ದೇವರ ಅಸ್ತಿತ್ವದ ದರ್ಶನವಾಗುತ್ತದೆ. ದೇವರು ಅನುಭವಗಮ್ಯ. ಪ್ರತಿಯೊಬ್ಬರ ಮನದಲ್ಲೂ ಇದ್ದಾನೆ. ಭಗವಂತ ನಮ್ಮನ್ನು ಹೆಚ್ಚೇ ಪ್ರೀತಿಸುವವನಾಗಿದ್ದು ನಮ್ಮ ಕಷ್ಟಗಳಿಗೆ ಸ್ವತಃ ಧಾವಿಸಿಬರುವ ಕರುಣಾಮಯಿ. ಧ್ಯಾನ ಸಾಧನೆಯಿಂದ ಇಂದಿನ ಎಲ್ಲ ಮನದ ಸಂಕಟಗಳಿಗೆ ರಾಮಬಾಣವಿದೆ. ನಮ್ಮ ಹಿಂದು ಪರಂಪರೆಯಲ್ಲಿ ಚಾತುರ್ಮಾಸ್ಯಕ್ಕೆ ಅತ್ಯಂತ ಮಹತ್ವವಿದೆ ಎಂದರು.
ಕುಮಟಾದಲ್ಲಿ ಚಾತುರ್ಮಾಸ್ಯ ಮಾಡುವುದು ಶ್ರೀ ವಿದ್ಯಾಧಿರಾಜ ಶ್ರೀಗಳ ಸಂಕಲ್ಪವಾಗಿತ್ತು. 52 ವರ್ಷಗಳ ಹಿಂದೆ ಪರಮಗುರು ದ್ವಾರಕಾನಾಥರು ಚಾತುರ್ಮಾಸ್ಯ ಮಾಡಿದ ಸ್ಥಳದಲ್ಲಿ ಮತ್ತೊಮ್ಮೆ ಚಾತುರ್ಮಾಸ್ಯ ಮಾಡುವುದು ಅತ್ಯಂತ ಯೋಗ್ಯ ಎಂಬ ಕಾರಣಕ್ಕೆ ಇದು ದೈವನಿರ್ಣಯವಾಗಿದೆ. ಕುಮಟಾಕ್ಕೆ ಇಂದಿರಾಕಾಂತ ಗುರುಗಳ ಸಹಿತ ಎಲ್ಲ ಗುರುಗಳ ವಿಶೇಷ ಕೃಪಾದೃಷ್ಟಿಯಿದೆ. ಕುಮಟಾದ ಜನತೆಗೆ ದೇವ-ಗುರುಗಳ ಸಂಪೂರ್ಣ ಅನುಗ್ರಹವಾಗಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಮಠದ ಕೇಂದ್ರ ಸಮಿತಿಯ ಆನಂದು ಶಾನಭಾಗ, ಶ್ರೀನಿವಾಸ ಡೆಂಪೋ, ಆರ್. ಆರ್. ಕಾಮತ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಗೋಪಾಲ ಕಿಣಿ, ಶಾಂತೇರಿ ಕಾಮಾಕ್ಷಿ ಮಂದಿರದ ಮುಖ್ಯಸ್ಥ ಶೇಷಗಿರಿ ಶಾನಭಾಗ, ಪ್ರಮುಖರಾದ ದಿನೇಶ ನಾಯಕ ಹುಬ್ಬಳ್ಳಿ, ಸುರೇಂದ್ರ ಶಾನಭಾಗ, ವಿ.ಜಿ.ಪ್ರಭು, ವೆಂಕಟ್ರಮಣ ಮಂದಿರದ ಮೊಕ್ತೇಸರ ವಸುದೇವ ಪ್ರಭು ಇನ್ನಿತರರು ಗುರುಗಳಿಗೆ ಫಲಪುಷ್ಪ ಮಾಲಾರ್ಪಣೆಯೊಂದಿಗೆ ಭಕ್ತ ಸಮರ್ಪಿಸಿದರು.
ಬೆಳಿಗ್ಗೆಯಿಂದಲೇ ನಡೆದ ಕಾರ್ಯಕ್ರಮದಲ್ಲಿ ಸಂಪ್ರೋಕ್ಷಣೆ, ಮೃತ್ತಿಕಾ ಪೂಜನ, ಮಹಾಪೂಜೆ ಬಳಿಕ ಮಧ್ಯಾಹ್ನ ವೇದವ್ಯಾಸ ಪೂಜೆ ತರುವಾಯ ಶ್ರೀಗಳು ಚಾತುರ್ಮಾಸ್ಯ ವೃತವನ್ನು ವಿಧಿವತ್ತಾಗಿ ಸ್ವೀಕರಿಸಿದರು. ಶ್ರೀಗಳ ಪಟ್ಟಾಭಿಷೇಕದ ಪ್ರಥಮ ವರ್ಧಂತಿ ಆಚರಿಸಿದ ಬಳಿಕ ಧರ್ಮಸಭೆ ನಡೆಯಿತು.