ಅಜ್ಜಂಪುರ ತಾಲೂಕಿನ ನಾರಣಾಪುರ ಗ್ರಾಮದಲ್ಲಿ ನಮ್ಮ ಹಳ್ಳಿ ಸಂಘ ಮತ್ತು ಚಿಕ್ಕಮಗಳೂರು ಸಾವಯವ ರೈತರ ಬಳಗದಿಂದ ಏರ್ಪಡಿಸಿದ್ದ ನಮ್ಮ ಹಳ್ಳಿಯ ನಡೆ ಸಾವಯವ ಕೃಷಿಯ ಕಡೆ ಎಂಬ ಕಾರ್ಯಕ್ರಮವನ್ನುಪ್ರಗತಿಪರ ಕೃಷಿಕ ಚಂದ್ರಶೇಖರ ನಾರಣಾಪುರ ಉದ್ಘಾಟಿಸಿದರು. 
ಜಿಲ್ಲೆ

ಅಹಾರ ಬೆಳೆಯುವ ಮಣ್ಣು ವಿಷವಾಗುತ್ತಿದೆ

ಚಿಕ್ಕಮಗಳೂರು: ಭವಿಷ್ಯದಲ್ಲಿ ಹಳ್ಳಿಗಳು ಸದೃಢವಾಗಿ ಇರಬೇಕಾದರೆ ನೈಸರ್ಗಿಕ ಕೃಷಿಯ ಅವಲಂಬನೆ ಹೆಚ್ಚಾಗ ಬೇಕು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಣಾಪುರ ಅಭಿಪ್ರಾಯಪಟ್ಟರು.

ಅಜ್ಜಂಪುರ ತಾಲೂಕಿನ ನಾರಣಾಪುರ ಗ್ರಾಮದಲ್ಲಿ ನಮ್ಮ ಹಳ್ಳಿ ಸಂಘ ಮತ್ತು ಚಿಕ್ಕಮಗಳೂರು ಸಾವಯವ ರೈತರ ಬಳಗದಿಂದ ಏರ್ಪಡಿಸಿದ್ದ ನಮ್ಮ ಹಳ್ಳಿಯ ನಡೆ ಸಾವಯವ ಕೃಷಿಯ ಕಡೆ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 50 ವರ್ಷಗಳಿಂದ ಅತಿಯಾಗಿ ಬಳಸಿದ ರಾಸಾಯನಿಕ ಗೊಬ್ಬರ ಮತ್ತು ಔಷಧಗಳಿಂದ ಅಹಾರ ಬೆಳೆಯುವ ಮಣ್ಣು ಪರಿಪೂರ್ಣವಾಗಿ ರೋಗಗ್ರಸ್ತಗೊಂಡಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಅಜ್ಜಂಪುರದ ಸುತ್ತ ಮುತ್ತಲಿನ ಭಾಗದಲ್ಲಿ ಯಾವುದೇ ಬೆಳೆಗಳನ್ನು ಬೆಳೆಯಲಾಗದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದರು.

ಭವಿಷ್ಯದ ದೃಷ್ಟಿಯಿಂದ ರೈತರು ತಮ್ಮ ಹಿಡುವಳಿಯ  ಶೇಕಡಾ ಇಪ್ಪತ್ತು ಭಾಗದಷ್ಟು ಜಮೀನನ್ನು ನೈಸರ್ಗಿಕ ಕೃಷಿಗೆ ಅಳವಡಿಸಿಕೊಳ್ಳಬೇಕು. ಇದಕ್ಕೆ ಬೇಕಾದ ತಾಂತ್ರಿಕ ಸಲಹೆಗಳನ್ನು ಚಿಕ್ಕಮಗಳೂರು ಸಾವಯವ ರೈತರ ಬಳಗ ನೀಡುತ್ತದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನ ನೈಸರ್ಗಿಕ ಕೃಷಿಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಶ್ವೇಶ್ವರ ಸಜ್ಜನ್ ಅವರು ಮರ ಆಧಾರಿತ ಕೃಷಿ ಬಗ್ಗೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಸುರೇಶ್ ಕುಮಾರ್ ಅವರು ತೋಟಗಾರಿಕೆ ಬೆಳೆಗಳಲ್ಲಿ ಉಪ ಬೆಳೆಗಳ ಸಂಯೋಜನೆ ಬಗ್ಗೆ ಉಪನ್ಯಾಸ ನೀಡಿದರು. ನಮ್ಮ ಹಳ್ಳಿ ಸಂಘದ ಡಾ. ಷಣ್ಮುಖ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿ ಪರ ಕೃಷಿಕ  ತಮ್ಮಟದಳ್ಳಿ ತಿಪ್ಪೇಶಪ್ಪ ಗಂಗನಹಳ್ಳಿ ಓಂಕಾರ ಸ್ವಾಮಿ ಉಪಸ್ಥಿತರಿದ್ದರು. ಬಿಸ್ಲೆರೆ ಭರತ್ ಪ್ರಸ್ತಾವಿಕವಾಗಿ ಮಾತನಾಡಿದರು. ನಂದಕುಮಾರ್ ಮತ್ತು ದರ್ಶನ್ ಕಾರ್ಯಕ್ರಮ ನಿರೂಪಿಸಿದರು.