ಕೊಪ್ಪಳ:ತಾಲೂಕಿನ ಚಿಕ್ಕಬಗನಾಳ ಗ್ರಾಮದಲ್ಲಿ ಧೃವದೇಶ ಮೇಟಾಸ್ಟೀಲ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ಮತ್ತೊಂದು ಘಟಕ ವಿಸ್ತರಣೆ ಆರಂಭದ ಕುರಿತು ಮಂಗಳವಾರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಮ್ಮಿಕೊಂಡಿದ್ದ ಅಹವಾಲು ಸಭೆಯಲ್ಲಿ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾದವು.
ಹಲವು ವರ್ಷಗಳ ಹಿಂದೆ ಕಾರ್ಖಾನೆ ಆರಂಭವಾಗಿದ್ದು, ಇದೀಗ 84 ಎಕರೆಗೆ ವಿಸ್ತರಿಸಲು ಮುಂದಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ ಅಹವಾಲು ಆಲಿಕೆ ಸಭೆ ಹಮ್ಮಿಕೊಳ್ಳಲಾಯಿತು.ಕಾರ್ಖಾನೆಗಳು ತುಂಗಭದ್ರಾ ಜಲಾಶಯಕ್ಕೆ ವಿಷ ನೀರು ಬಿಡುತ್ತವೆ. ಅದಿರು ಲಾರಿ ಓಡಾಟದಿಂದ ರಸ್ತೆ ಸಂಪೂರ್ಣ ಹಾಳಾಗಿವೆ. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು. ಈ ವೇಳೆ ವಿಸ್ತರಣೆ ಪರ-ವಿರೋಧವಾಗಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಇದರಿಂದ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಸಿಪಿಐ ಮಹಾಂತೇಶ ಸಜ್ಜನ್ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಡಿಸಿ ನಲಿನ್ ಅತುಲ್, ನಿಮ್ಮ ಅಭಿಪ್ರಾಯಗಳನ್ನು ನೀಡಿದ್ದೀರಿ. ಅವುಗಳನ್ನು ಪರಿಶೀಲಿಸಲಾಗುವುದು. ಅಧಿಕಾರಿಗಳಿಗೆ ತಿಳಿಸಿ ಶೀಘ್ರ ರಸ್ತೆ ಸರಿಪಡಿಸುವುದಾಗಿ ಭರವಸೆ ನೀಡಿದರು. ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ್ ವಿಠ್ಠಲ ಚೌಗಲಾ, ಪರಿಸರ ಅಧಿಕಾರಿ ಬಿ.ಎ.ಮುರಳೀಧರ ಇತರರಿದ್ದರು.