ಅರಕಲಗೂಡು: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಲೋಕಾಯುಕ್ತ ಎಸ್ಪಿ ಮಲ್ಲಿಕ್ ಸಾರ್ವಜನಿಕರಿಂದ ಅಹವಾಲು ಆಲಿಸಿದರು.
ಚಿಕ್ಕಳ್ಳಿಯ ರೈತ ನಾಗೇಶ್ ಮಾತನಾಡಿ, ಹೈಕೋರ್ಟ್, ತಹಸೀಲ್ದಾರ್ ಕೋರ್ಟ್‌ನಲ್ಲಿ 9 ಗುಂಟೆ ಜಮೀನು ನಮ್ಮಂತೆಯಾಗಿದೆ. ನಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಅರ್ಜಿ ನೀಡಿದರೆ ನಾಪತ್ತೆಯಾಗುತ್ತಿದೆ. ಮೂರು ಬಾರಿ ಅರ್ಜಿ ನೀಡಿದ್ದು, 3 ಬಾರಿಯೂ ಅರ್ಜಿ ನಾಪತ್ತೆಯಾಗಿದೆ. ಇದು ನಾಲ್ಕನೇ ಬಾರಿ ಅರ್ಜಿ ನೀಡುತ್ತಿದ್ದೇನೆ. ಪ್ರತಿ ಬಾರಿ ಬೆಂಗಳೂರಿನಿಂದ ಬರಲಾಗುವುದಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಬರಬೇಕಿದೆ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಮಲ್ಲಿಕ್ ಅವರು ಪ್ರತಿಕ್ರಿಯಿಸಿ, ಕೂಡಲೇ ಪರಿಶೀಲಿಸಿ ಸರಿಪಡಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ಈ ಕುರಿತು ಕಾರಣ ಕೇಳಿ ಕೇಸ್ ವರ್ಕರ್‌ಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಗುವುದು ಎಂದು ತಿಳಿಸಿದರು.
ಅಲ್ಲಪಟ್ಟಣ ರಾಮಶೆಟ್ಟಿ ಮಾತನಾಡಿ, ನಾನು ಸೇರಿದಂತೆ ಇಬ್ಬರಿಗೆ ತಲಾ 4 ಎಕರೆ ಜಮೀನು ಬರಬೇಕು. ಆದರೆ ಬೇರೆಯವರಿಗೆ 6 ಎಕರೆ ನೀಡಿ, ನನಗೆ 2 ಎಕರೆ ನೀಡಿದ್ದಾರೆ. ಇದನ್ನು ಸರಿಪಡಿಸಿಕೊಡುವಂತೆ ಸಂಬಂಧಪಟ್ಟವರಿಗೆ ಅರ್ಜಿ ನೀಡಿದರೂ ಪ್ರಯೋಜನವಾಗಿಲ್ಲ. ಈಗಾಗಲೇ ಆತ ನನ್ನ 2 ಎಕರೆ ಜಮೀನನ್ನು ಮಾರಾಟ ಮಾಡಿದ್ದು, ಸರ್ವೇ ಮಾಡಿ ಬಿಡಿಸಿಕೊಡುವಂತೆ ಅರ್ಜಿ ನೀಡಿ ಹಲವು ತಿಂಗಳೇ ಕಳೆದರೂ ಕ್ರಮ ಕೈಗೊಂಡಿಲ್ಲ. ಇದಕ್ಕೆ ಮಲ್ಲಿಕ್ ಅವರು ಪ್ರತಿಕ್ರಿಯಿಸಿ, ಬಡವರನ್ನು ಈ ರೀತಿ ಅಲೆಸುವುದು ಒಳ್ಳೆಯದಲ್ಲ. ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ತಹಸೀಲ್ದಾರ್ ಅವರು ಮಾಡಿಕೊಟ್ಟರೆ ಒಳ್ಳೆಯದು, ಇಲ್ಲವಾದರೆ ಹಾಸನ ಲೋಕಾಯುಕ್ತ ಕಚೇರಿಗೆ ಬಂದು ದೂರು ನೀಡಿ ಬಗೆಹರಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಹುಲ್ಲಂಗಾಲ ಗ್ರಾಮದ ಶಾಲಾ ಮೈದಾನ ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆ ಗ್ರಾಮಸ್ಥರು ದೂರು ನೀಡಿದರು. ಕೂಡಲೇ ಪರಿಶೀಲಿಸಿ ವರದಿ ನೀಡುವಂತೆ ತಹಸೀಲ್ದಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಮಲ್ಲಿಕ್, ಈ ಕಾರ್ಯಕ್ರಮದಲ್ಲಿ 9 ಅರ್ಜಿಗಳು ಸ್ವೀಕೃತವಾಗಿವೆ. ಅದರಲ್ಲಿ 7 ಅರ್ಜಿಗಳು ಕಂದಾಯ ಇಲಾಖೆಗೆ ಸೇರಿದ್ದು, ಒಂದು ಆಹಾರ ಪೂರೈಕೆ, ಮತ್ತೊಂದು ತಾಲೂಕು ಪಂಚಾಯಿತಿ ಇಒಗೆ ಸೇರಿದ್ದಾಗಿದೆ. 4 ಅರ್ಜಿಗಳನ್ನು ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ವಿಲೇವಾರಿ ಮಾಡಲಾಗಿದೆ. ಉಳಿದ ಅರ್ಜಿಗಳನ್ನು ಸೂಕ್ತವಾಗಿ ಪತ್ರ ವ್ಯವಹರಿಸಿ ಪರಿಹಾರಕ್ಕಾಗಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಲೋಕಾಯುಕ್ತ ಅಧಿಕಾರಿಗಳು ತಾಲೂಕು ಕೇಂದ್ರಕ್ಕೆ ಭೇಟಿ ನೀಡಿ, ಸಾರ್ವಜನಿಕರ ದೂರುಗಳನ್ನು ದಾಖಲಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದರು. ಲೋಕಾಯುಕ್ತ ಅಧಿಕಾರಿಗಳಾದ ರವಿಕುಮಾರ್, ಶಿಲ್ಪಾ ಇತರರು ಇದ್ದರು.