ಬಾಗಲಕೋಟೆ ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ರಾಷ್ಟ್ರ ಸೇವಿಕಾ ಸಮಿತಿ ಸಹಯೋಗದಲ್ಲಿ ಗುರುವಾರ ನಡೆದ ಅಹಲ್ಯಾಬಾಯಿ ಹೊಳ್ಕಲರ ಅವರ ಜನ್ಮದಿನಾಚರಣೆಯ ಅಂಗವಾಗಿ ವಿಜಯನಗರ ಪ್ರಾಂತದ ಪ್ರಾಂತ ಕಾರ್ಯವಹಿಕಾ ವೇದಾ ಕುಲಕರ್ಣಿ ಉಪನ್ಯಾಸ ನೀಡಿದರು.  
ಜಿಲ್ಲೆ

ಅಹಲ್ಯಾಬಾಯಿ ಹೊಳ್ಕಲರ ಜೀವನಾದರ್ಶ ಅನುಕರಣೀಯ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಅಹಲ್ಯಾಬಾಯಿ ಹೋಳ್ಕಲರ ಅವರ ಜೀವನಾದರ್ಶಗಳು ಇಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ಅನುಕರಣೀಯ ಎಂದು ರಾಷ್ಟ್ರ ಸೇವಿಕಾ ಸಮಿತಿಯ ವಿಜಯನಗರ ಪ್ರಾಂತದ ಪ್ರಾಂತ ಕಾರ್ಯವಹಿಕಾ ವೇದಾ ಕುಲಕರ್ಣಿ ಹೇಳಿದರು.

ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ರಾಷ್ಟ್ರ ಸೇವಿಕಾ ಸಮಿತಿ ಸಹಯೋಗದಲ್ಲಿ ಗುರುವಾರ ನಡೆದ ಅಹಲ್ಯಾಬಾಯಿ ಹೊಳ್ಕಲರ ಅವರ ಜನ್ಮದಿನಾಚರಣೆಯ ಅಂಗವಾಗಿ ವಿಶೇಷ ಅತಿಥಿ ಉಪನ್ಯಾಸ ನೀಡಿ ಮಾತನಾಡಿದರು.

ಅಹಲ್ಯಾಬಾಯಿ ಹೊಳ್ಕಲರ ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಇಡೀ ಮಾಳ್ವ ರಾಜಮನೆತನದ ಜವಾಬ್ಧಾರಿಯನ್ನು ಹೊತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಸ್ತ್ರೀ ೩೦೦ ವರ್ಷಗಳ ಹಿಂದೆ ಮಹಿಳೆಯರಿಗೆ ಯಾವುದೇ ಸೌಲಭ್ಯಗಳನ್ನು ನೀಡದಿರುವ ಸಂದರ್ಭದಲ್ಲೂ ಎಲ್ಲಾ ಕಷ್ಟಗಳನ್ನು ಮೆಟ್ಟಿ ತಮ್ಮ ಮಾವನವರ ಮಾರ್ಗದರ್ಶನದಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ನೀಡಿರುವ ಕೊಡುಗೆ ಅವಿಸ್ಮರಣೀಯ. ಇವರ ಜೀವನಾದರ್ಶಗಳು ಇಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ಅನುಕರಣೀಯ ಎಂದರು.

ಅವರ ದಿಟ್ಟ ನಡೆ, ನ್ಯಾಯಪರತೆ, ನಿಸ್ವಾರ್ಥ ಸೇವೆ, ಸರ್ವರನ್ನೂ ಸಮಾನರನ್ನಾಗಿ ಕಾಣುವ ಮನೋಭಾವ ಎಂತವರನ್ನೂ ಬೆರಗುಗೊಳಿಸುತ್ತದೆ. ಅಽಕಾರದ ವ್ಯಾಮೋಹಕ್ಕೊಳಗಾಗದೇ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕು ನಡೆಸುವ ರೀತಿ ಮೆಚ್ಚುವಂತದ್ದು. ಅವರ ವೈಯಕ್ತಿಕ ಆದಾಯದಲ್ಲಿ ಹಲವಾರು ದೇವಾಲಯಗಳನ್ನು ನಿರ್ಮಾಣ, ಜೀರ್ಣೊದ್ಧಾರದ ಕಾರ್ಯವನ್ನು ಕೈಗೊಂಡಿದ್ದು ಅವರೇ ಸಾಧನೆಯ ಶಿಖರಕ್ಕೆ ದಕ್ಕುವ ಗರಿಯಾಗಿದೆ ಎಂದು ತಿಳಿಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಜೆ. ಒಡೆಯರ ಮಾತನಾಡಿ, ಅಹಲ್ಯಾಬಾಯಿ ಹೊಳ್ಕಲರ ಅವರ ಜೀವನ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಯಾವುದೇ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲದಿರುವ ಕಾಲಘಟ್ಟದಲ್ಲಿ ಅವರು ಇಡೀ ಭಾರತದಾದ್ಯಂತ ಕೈಗೊಂಡ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳು ನಿಜಕ್ಕೂ ಆಶ್ಚರ್ಯಕರ ಸಂಗತಿ. ಅಹಲ್ಯಾಬಾಯಿ ಹೊಳ್ಕಲರ ಅವರ ಕುರಿತು ಮತ್ತಷ್ಟು ಸಂಶೋಧನೆಗಳು ಅಗತ್ಯ ಎಂದು ಹೇಳಿದರು.

ಮಂಜುಳಾ ಚಮಚಿ ನಿರೂಪಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಜಯಶ್ರೀ ಎಸ್. ಲಾಗಲೋಟಿ ಸ್ವಾಗತಸಿದರು. ಜ್ಯೋತಿ ಕದಾಂಪುರ ವಂದಿಸಿದರು.