ಜಿಲ್ಲೆ

ಅಹಂನಿಂದ ಪ್ರಸಾದನ ಕಲೆಗಾರರ ಗೌರವಕ್ಕೆ ಧಕ್ಕೆ: ಸಂವಾದದಲ್ಲಿ ಬಿ.ಎಂ.ರಾಮಚಂದ್ರ ಬೇಸರ

ಮೈಸೂರು: ಪ್ರಸಾದನ ಕಲೆಗೆ ಹಿಂದೆ ಅತ್ಯಂತ ಗೌರವಯುತವಾದ ಸ್ಥಾನವಿತ್ತು. ಕಲೆಗಾರರನ್ನು ಹುಡುಕಿ ಕಲಾವಿದರು ಬರುತ್ತಿದ್ದರು. ಈಗ ನಾನು, ನನ್ನಿಂದಲೇ ಎನ್ನುವ ಅಹಂನಿಂದ ಗೌರವಕ್ಕೆ ಕುಂದುಂಟಾಗಿದೆ ಎಂದು ಹಿರಿಯ ಪ್ರಸಾದನ ಕಲೆಗಾರ ಬಿ.ಎಂ.ರಾಮಚಂದ್ರ ಬೇಸರ ವ್ಯಕ್ತಪಡಿಸಿದರು.
ನಗರದ ಮೈಸೂರು ಆರ್ಟ್ಸ್ ಗ್ಯಾಲರಿಯಲ್ಲಿ ಶನಿವಾರ ಆಯೋಜಿಸಿದ್ದ ‘ಸಾಧಕರೊಂದಿಗೆ ಸಂವಾದ’ದ 72ನೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ತಮ್ಮ ಅನುಭವ ಹಂಚಿಕೊಂಡರು.
ಹಿಂದೆ ರಾಜ್‌ಕುಮಾರ್, ವಿಷ್ಣುವರ್ಧನ್, ರಜನಿಕಾಂತ್ ಸೇರಿದಂತೆ ದೊಡ್ಡ, ದೊಡ್ಡ ಕಲಾವಿದರೂ ಪ್ರಸಾದನ ಕಲೆಗಾರರನ್ನು ಗೌರವದಿಂದ ಕಾಣುತ್ತಿದ್ದರು. ಆದರೆ ಈಗ ಕಲಾವಿದರನ್ನು ಹುಡುಕಿಕೊಂಡು ಪ್ರಸಾದನ ಕಲೆಗಾರರು ಹೋಗುವ ಪರಿಸ್ಥಿತಿ ಬಂದಿದೆ. ಇದರೊಂದಿಗೆ ಪ್ರಸಾದನ ಕಲೆಗಾರರಲ್ಲಿಯೂ ನಾನು, ನನ್ನಿಂದಲೇ ಎನ್ನುವ ಅಹಂ ಹೆಚ್ಚಾಗಿದೆ ಎಂದರು.
ಕಲಾವಿದರು, ಪ್ರಸಾದನ ಕಲೆಗಾರರು ಸೇರಿದಂತೆ ಎಲ್ಲರೂ ಕಲೆಯನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಆಗ ಕಲೆಯನ್ನು ಆರಾಧಿಸುತ್ತಿದ್ದರಿಂದ ಅವರು ಬೆಳೆಯುತ್ತಿದ್ದರು, ಕಲೆಯೂ ಬೆಳೆಯುತ್ತಿತ್ತು. ಆದರೆ ಈಗ ವ್ಯಕ್ತಿ, ವೈಯಕ್ತಿಕ ಆರಾಧನೆ ಹೆಚ್ಚಾಗಿದ್ದು, ಇದರಿಂದ ನಮ್ಮೆಲ್ಲರ ಬದುಕು ಬಣ್ಣ ಮಾಸಿದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಾಮಾನ್ಯನಾಗಿ ರಂಗಭೂಮಿಗೆ ಬಂದು ಕ್ರಮೇಣ ನಟರಾಗಿ, ನಿರ್ದೇಶಕರಾಗಿ, ವರ್ಣಾಲಂಕಾರ ಸೇರಿದಂತೆ ವಿವಿಧ ಹಂತದಲ್ಲಿ ಬೆಳೆದೆ. ಅಲ್ಲದೆ ಚಲನಚಿತ್ರ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಪುಟ್ಟಣ್ಣ ಕಣಗಾಲ್, ಕಣಗಾಲ್ ಪ್ರಭಾಕರ ಶಾಸ್ತ್ರಿ, ಹುಣಸೂರು ಕೃಷ್ಣಮೂರ್ತಿ, ಬಿ. ವಿ. ಕಾರಂತ, ಗಿರೀಶ್ ಕಾರ್ನಾಡ್, ಹಂಸಲೇಖ ಸೇರಿದಂತೆ ಅನೇಕ ಕಲಾ ದಿಗ್ಗಜರ ಚಲನಚಿತ್ರಗಳಿಗೆ ಅವಶ್ಯಕತೆ ತಕ್ಕಂತೆ ಪರಿಕರ ಒದಗಿಸುವುದರ ಜತೆಗೆ ಕಲಾವಿದರಿಗೆ ಪ್ರಸಾದನ, ವಸ್ತ್ರಾಲಂಕಾರ ನೀಡಿದೆ ಎಂದರು.
ಶ್ರೀರಾಜೇಶ್ವರಿ ವಸ್ತ್ರಾಲಂಕಾರ ಸಂಸ್ಥೆ ಮೂಲಕ ಅತ್ಯಂತ ಉತ್ಸವಭರಿತರಾಗಿ ಇಂದಿಗೂ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ರಂಗನಟಿಯೂ ಆಗಿರುವ ಪತ್ನಿ ಎಚ್.ಬಿ.ಯಶೋದಾ, ಮಕ್ಕಳಾದ ಮಹಾಲಿಂಗ, ಮಂಜುನಾಥ ಇತರರು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ಮೈಸೂರು ಆರ್ಟ್ಸ್ ಗ್ಯಾಲರಿ ಅಧ್ಯಕ್ಷ ಎಲ್.ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ರಂಗ ಕಲಾವಿದೆಯೂ ಅದ ವಿಜ್ಞಾನ ಲೇಖಕಿ ಶ್ರೀಮತಿ ಹರಿಪ್ರಸಾದ್, ಕೆ. ಜೆ. ನಾರಾಯಣ ಕಿಕ್ಕೇರಿ, ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ಪತ್ರಕರ್ತ ರಂಗನಾಥ್ ಮೈಸೂರು, ಕಲಾವಿದ ಎನ್. ಎಸ್. ಶ್ರೀಧರ್, ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ, ಮೈಸೂರು ಆರ್ಟ್ಸ್ ಗ್ಯಾಲರಿ ಕಾರ್ಯದರ್ಶಿ ಜಮುನಾರಾಣಿ ಮಿರ್ಲೆ, ಸಂಚಾಲಕ ಶ್ರೀಕಂಠಮೂರ್ತಿ, ಸದಸ್ಯರಾದ ಸಾಂಬಾಮೂರ್ತಿ, ಮುನಿರಾವ್ ಮಾನೆ ಇತರರು ಇದ್ದರು.