ಬಾಗಲಕೋಟೆ ನಗರದ ಹೋಳಿ ಸಂಭ್ರಮದ ದೃಶ್ಯ. 
ಜಿಲ್ಲೆ

ಅಸ್ಪೃಶ್ಯತೆ ವಿರುದ್ಧ ದಿವ್ಯ ಸಂದೇಶ ಸಾರಿದ್ದ ಹೋಳಿ..!

ಸಂತೋಷ ದೇಶಪಾಂಡೆ
ಬಾಗಲಕೋಟೆ: ದೇಶದಲ್ಲಿ ಕೊಲ್ಕತ್ತಾ ನಗರ ನಂತರ ಬಾಗಲಕೋಟೆ ನಗರ ಬಣ್ಣದೋಕುಳಿಗೆ ಹೆಚ್ಚು ಖ್ಯಾತಿ ಪಡೆದಿದೆ. ಕೇವಲ ರಂಗೀನಾಟಕ್ಕೆ ಮಾತ್ರ ಹೋಳಿ ಸಿಮೀತವಾಗದೇ ಅಸ್ಪೃಶ್ಯತೆ ವಿರುದ್ಧ ರಣಕಹಳೆ ಮೊಳಗಿಸಿದ್ದ ಹೆಗ್ಗಳಿಕೆ ಪಡೆದಿದೆ.

ನೂರಾರು ವರ್ಷಗಳಿಂದ ಬಾಗಲಕೋಟೆಯಲ್ಲಿ ಹೋಳಿಯನ್ನು ವಿಶೇಷವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿತ್ತು. ಸಮಾಜದಲ್ಲಿ ಸಮಾನತೆ ಸಾರುವ ನಿಟ್ಟಿನಲ್ಲಿ ಇಲ್ಲಿನ ಹೋಳಿ ಶತಮಾನಗಳಿಂದಲು ಮಾದರಿಯಾಗಿದೆ. ಇದನ್ನು ಕಂಡಿದ್ದ ಪೇಶ್ವೆಗಳು ಸ್ವಾತಂತ್ರ‍್ಯ ಪೂರ್ವದಲ್ಲಿ ಸಾಮಾಜದಲ್ಲಿ ಸೌಹಾರ್ದತೆ ಹಾಗೂ ಅಸ್ಪೃಶ್ಯತೆ ವಿರುದ್ಧ ದಿವ್ಯ ಸಂದೇಶ ಸಾರುವುದಕ್ಕೆ ಬಾಗಲಕೋಟೆ ಹೋಳಿ ಆಚರಣೆ ಹೊಸರೂಪ ನೀಡಿದರು. ಇಂದಿಗೂ ಅದನ್ನು ಮುಂದೆವರೆಸಿಕೊಂಡು ಹೋಗಲಾಗುತ್ತಿದೆ.

ಐದು ಪೇಟೆ, ಐದು ಬಾಬುದಾರರು:
ಹೋಳಿ ಆಚರಣೆಯಲ್ಲಿ ಬಾಗಲಕೋಟೆಯ ಸಾಂಸ್ಕೃತಿಕ ಬದುಕು ಅಡಗಿದೆ. ಇಲ್ಲಿರುವ ಐದು ಪೇಟೆಗಳಲ್ಲಿ. ಕಿಲ್ಲಾ, ವೆಂಕಟಪೇಟೆ, ಹೊಸಪೇಟೆ, ಹಳಪೇಟೆ, ಜೈನ್‌ಪೇಟೆಯಿಂದ ಒಂದೊಂದು ದಿನ ಬಣ್ಣದಾಟ ನಡೆಯುತ್ತಿದೆ. ಮುಳಗಡೆಯಾದ ಬಳಿಕ ಮೂರು ಭಾಗವಾಗಿರುವ ಬಾಗಲಕೋಟೆ ವಿದ್ಯಾಗಿರಿ, ನವನಗರಕ್ಕೆ ಹಬ್ಬ ವಿಸ್ತರಣೆಗೊಂಡಿದೆ. ಪೇಶ್ವೆಗಳ ಆಡಳಿತದಲ್ಲಿ ನಿಶಾನೆಗಳನ್ನು ಹೊತ್ತ ಸರನಾಡಗೌಡ, ಸರದೇಸಾಯಿ, ವೈಜಾಪುರ, ಶೆಟ್ಟರ, ಕುಲಕರ್ಣಿ ಬಾಬುದಾರರು ಈ ಉತ್ಸವಕ್ಕೆ ವಾರಸುದಾರರಾಗಿದ್ದಾರೆ. ಹುಣ್ಣಿಮೆಯ ದಿನ ಈ ಬಾಬುದಾರರು ಸೇರಿ ಓಣಿಯ ಪ್ರಮುಖರು ಒಗ್ಗೂಡಿಕೊಂಡು ದಲಿತ ಕೇರಿಯ ಬಾಬುದಾರ ಖಾತೆದಾರರ ಮನೆಗೆ ತೆರಳಿ ಹಬ್ಬದ ಆಚರಣೆಗೆ ವೀಳ್ಯೆದೆಲೆ ಮೂಲಕ ಆಹ್ವಾನ ನೀಡುತ್ತಾರೆ. ಅಲ್ಲಿಂದಲೇ ಕಿಚ್ಚು ತಂದು ಬೆಳಗಿನಜಾವ ಹುಬ್ಬಾ ನಕ್ಷತ್ರ ಗೋಚರಿಸುತ್ತಿದ್ದಂತೆ ಕಿಲ್ಲಾದಲ್ಲಿ ಮೊದಲಿಗೆ ಕಾಮದಹನ ಮಾಡಲಾಗುತ್ತದೆ. ನಂತರ ಹೋಳಿ ಆಚರಣೆ ನಡೆಯುತ್ತದೆ.

ಇನ್ನು ಈ ಮೊದಲು ಐದು ದಿನಗಳಕಾಲ ನಡೆಯುತ್ತಿದ್ದ ಬಣ್ಣದೋಕುಳಿ ಸದ್ಯ ಮೂರು ದಿನಗಳಿಗೆ ಮಾತ್ರ ಸಿಮೀತವಾಗಿದೆ. ಆದರೆ, ಐದು ದಿನಗಳ ಕಾಲ ಸೋಗಿನ ಬಂಡಿಗಳ ಮೆರವಣಿಗೆ ನಡೆಯುತ್ತದೆ. ಸೋಗಿನ ಗಾಡಿಗಳು ರಾಷ್ಟ್ರೀಯತೆ, ಭಾವೈಕ್ಯತೆ, ಪೌರಾಣಿಕ, ಧಾರ್ಮಿಕ ಪರಂಪರೆಯನ್ನು ಸಾಕ್ಷೀಕರಿಸುತ್ತವೆ. ಮೆರವಣಿಗೆ ನೋಡಲು ಜನ ಮುಗಿ ಬೀಳುತ್ತಾರೆ.

ನವಾಬರ ಮಾರು ಹೋಗಿದ್ದರು:
ಬಾಗಲಕೋಟೆ ಹೋಳಿ ಉತ್ಸವ ಕಂಡು ಸವಣೂರ ನವಾಬರ ಕೂಡಾ ಮಾರು ಹೋಗಿದ್ದರು. ನವಾಬರ ಎದುರು ಬಾಗಲಕೋಟೆ ಯುವಕರು ಆಕರ್ಷಕ ಹಲಿಗೆ ಮಜಲು ನುಡಿಸಿ ಗಮನ ಸೆಳೆದಿದ್ದರು. ಇದಕ್ಕೆ ಮನಸೋತ ಹೋಗಿದ್ದ ನವಾಬರು ಬಂಗಾರದ ಪದಕ ನೀಡಿದ್ದು ಇತಿಹಾಸಪುಟದಲ್ಲಿ ದಾಖಲಾಗಿದೆ. ಇನ್ನು ೧೯೮೭ರ ಅವಧಿಯಲ್ಲಿ ಪ್ರಕಾಶ ತಪಶೆಟ್ಟಿ ಅವರು ಹೋಳಿ ಆಚರಣೆ ಸಮಿತಿ ಅಧ್ಯಕ್ಷರಿದ್ದ ವೇಳೆಯಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಹೂಗಳ ಹಬ್ಬದಲ್ಲಿ ಬಾಗಲಕೋಟೆ ಹಲಿಗೆ ಮೇಳ ರಾಜ್ಯವನ್ನು ಪ್ರತಿನಿಧಿಸಿದ್ದಲ್ಲದೇ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡು ಬಂದಿತ್ತು. ತನ್ಮೂಲಕ ಕೋಟೆನಗರಿ ಹಲಗೆ ನಾದ ದಿಲ್ಲಿಕೋಟೆಯಲ್ಲಿಯು ಸದ್ದು ಮಾಡಿತ್ತು. ತುರಾಯಿ ಹಲಿಗೆ ಬಾರಿಸುವವರು ರೇಷ್ಮೆ ವಸ್ತ್ರ, ತಲೆಗೆ ಪೇಟ ಹಾಕಿಕೊಂಡು ಪೂಜ್ಯ ಭಾವನೆಯಿಂದ ನಮಸ್ಕರಿಸುತ್ತಾರಿ ನುಡಿಸಲು ಆರಂಭಿಸುತ್ತಾರೆ. ಈ ನಾದಕ್ಕೆ ಮನಸೋಲದವರೇ ಇಲ್ಲ. ಬಾಗಲಕೋಟೆ ಹೋಳಿ ಉತ್ಸವ ಇತಿಹಾಸವನ್ನು ಮೋಡಲಪಾಯಿ ದೊಡ್ಡಾಟದ ಕಲಾವಿದ ವೀರಪ್ಪ ಶೆಟ್ಟರ ತಮ್ಮ ಪುಸ್ತಕದಲ್ಲಿ ದಾಖಲು ಮಾಡಿದ್ದಾರೆ. ಪೇಶ್ವೆಗಳಗ್ಗಿಂತ ಮೊದಲು ಬಾಗಲಕೋಟೆ ಹೋಳಿ ಉತ್ಸವ ಅದ್ದೂರಿಯಾಗಿ ಜರುಗುತ್ತಿತ್ತು ಎಂದು ಉಲ್ಲೇಖ ಮಾಡಿದ್ದಾರೆ