ಆಲೂರು ಪಟ್ಟಣದ ಮಿನಿವಿಧಾನಸೌಧ ಆವರಣದ ಮುಂಭಾಗ ಮಂಗಳವಾರ ಆಯೋಜಿಸಿದ್ದ ಅಸ್ಪಶ್ಯತೆ ನಿವಾರಣೆಯ ಜಾಗೃತಿ ಜಾಥಾಗೆ ತಹಸೀಲ್ದಾರ್ ನಂದಕುಮಾರ್ ಚಾಲನೆ ನೀಡಿದರು. 
ಜಿಲ್ಲೆ

ಅಸ್ಪೃಶ್ಯತೆ ನಿವಾರಣೆಯಿಂದ ಅಭಿವೃದ್ಧಿ ಸಾಧ್ಯ

ಆಲೂರು: ಮನುಷ್ಯ ಮನುಷ್ಯರನ್ನು ಕೀಳಾಗಿ ಕಾಣುವ ಪ್ರವೃತ್ತಿ ತೊಲಗಬೇಕು. ಆಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದು ತಹಸೀಲ್ದಾರ್ ನಂದಕುಮಾರ್ ಹೇಳಿದರು.

ಪಟ್ಟಣದ ಮಿನಿವಿಧಾನಸೌಧ ಆವರಣದ ಮುಂಭಾಗ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಸನ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಸನ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಅಸ್ಪಶ್ಯತೆ ನಿವಾರಣೆ ಜಾಗೃತಿ ಜಾಥಾದ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಡೀ ವಿಶ್ವವೇ ಮೆಚ್ಚಿಕೊಂಡಿರುವ ಭಾರತದ ಸಂವಿಧಾನ ಶ್ರೇಷ್ಠವಾದ ಗ್ರಂಥ. ಸಂವಿಧಾನದಲ್ಲಿ ಉಲ್ಲೇಖಿಸಿರುವ ಪ್ರತಿ ಅಂಶವೂ ಸಮಾನತೆ ಸಾರುತ್ತದೆ. ಎಲ್ಲರೂ ಒಂದೇ ನಾವೆಲ್ಲರೂ ಮನುಷ್ಯರು, ನಮಗೆಲ್ಲಾ ಸಮನಾಗಿ ಬಾಳಿ ಬದುಕುವ ಹಕ್ಕಿದೆ ಎಂದ ಅವರು, ಸಮಾಜವನ್ನು ಕಿತ್ತು ತಿನ್ನುತ್ತಿರುವ ಅಸ್ಪಶ್ಯತೆಯ ಪಿಡುಗನ್ನು ಶಾಶ್ವತವಾಗಿ ತೊಡೆದು ಹಾಕಬೇಕು. ಮೇಲು ಕೀಳು ಭಾವನೆ ಜನರ ಮನಸ್ಸಿನಿಂದ ದೂರವಾಗಬೇಕು. ಜನರು ಜಾತಿಯ ಸಂಕೋಲೆಯಿಂದ ಹೊರಬಂದು ವಿಶ್ವಮಾನವರಾಗಬೇಕು. ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತವಾಗಿರುವ ಅಸ್ಪಶ್ಯತೆಯನ್ನು ನಿರ್ಮೂಲನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪೊಲೀಸ್ ಇನ್ಸ್ಪೆಕ್ಟರ್ ಗಂಗಾಧರ್ ಮಾತನಾಡಿ, ಜನರು ಅರಿವಿನ ಕೊರತೆಯಿಂದ ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ದೇಶದಲ್ಲಿ ಅಸ್ಪಶ್ಯತೆ ತಾಂಡವವಾಡುತ್ತಿದ್ದು, ದಲಿತರು ಶೋಷಣೆಗೆ ಒಳಗಾಗುತ್ತಿದ್ದಾರೆ. ಜನರು ಅಸ್ಪಶ್ಯತೆ ಆಚರಣೆ ಬಿಟ್ಟು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಿಂಗರಾಜು ಮಾತನಾಡಿ, ಅಸ್ಪಶ್ಯತಾ ಆಚರಣೆಗೆ ಕಾನೂನ ಅಡಿಯಲ್ಲಿ ಶಿಕ್ಷೆ ಇರುವುದರಿಂದ ಈ ಬಗ್ಗೆ ಜನಸಾಮಾನ್ಯರಿಗೆ ಅರಿವಿನ ಕೊರತೆ ಇದ್ದು, ಇದರ ಬಗ್ಗೆ ಮಾಹಿತಿಯನ್ನು ಜನಸಾಮಾನ್ಯರಿಗೆ ಅರ್ಥ ಮಾಡಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಬೀದಿ ನಾಟಕಗಳ ಮೂಲಕ ಜನಸಾಮಾನ್ಯರಿಗೆ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ನಮ್ಮ ಇಲಾಖೆಯ ವತಿಯಿಂದ ಅದನ್ನು ಅನುಷ್ಠಾನಗೊಳಿಸುತ್ತಿದೆ. ಈ ಬೀದಿ ನಾಟಕದ ಜಾಗೃತಿ ರಥವು ಆಲೂರು ಪಟ್ಟಣದ ಬಸ್ ಸ್ಟಾಂಡ್, ಬೈರಾಪುರ, ಚನ್ನಾಪುರ, ಮಗ್ಗೆ,ರಾಯರ ಕೊಪ್ಪಲು ಹಾಗೂ ಕೆ.ಹೊಸಕೋಟೆ, ಹೊನ್ನೇನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸಂಚರಿಸಿ ಅಸ್ಪೃಶ್ಯತೆ ಆಚರಣೆಯ ಅರಿವನ್ನು ಮೂಡಿಸುವ ಬೀದಿ ನಾಟಕಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಲಾ ತಂಡದ ನಾಯಕ ಲೋಕೇಶ್, ಮಾರ್ಗದರ್ಶಕ ಚನ್ನರಾಯಿ, ಪರಮೇಶ್, ಸಿದ್ದರಾಜು ಜನನಾಯಕ ಪಲ್ಲವಿ, ಮುಖಂಡರಾದ ಬಿ.ಸಿ ಶಂಕರಾಚಾರ್, ಜವರಪ್ಪ, ಜಯಪ್ಪ, ಬೀದಿ ನಾಟಕ ತಂಡದ ಮುಖ್ಯಸ್ಥ ಲೋಕೇಶ್ ಇತರರು ಇದ್ದರು.