ಚಿತ್ರದುರ್ಗ: ಕರ್ನಾಟಕ ರಾಜ್ಯವನ್ನು ಅಸ್ಪಶ್ಯತೆಯಿಂದ ಮುಕ್ತಗೊಳಿಸಿದಾಗ ಮಾತ್ರ ಬಸವಣ್ಣ ಅವರಿಗೆ ನಿಜವಾಗಿಯೂ ಗೌರವ ಸಲ್ಲಿಸಿದಂತೆ. ಆ ನಿಟ್ಟಿನಲ್ಲಿ ಸಾಗೋಣ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಮಹದೇವ ಬಿದರಿ ಸಲಹೆ ನೀಡಿದರು.
ಮಹಾಸಭಾ ಹೊಳಲ್ಕೆರೆ ತಾಲೂಕು ಘಟಕ, ವೀರಶೈವ ಲಿಂಗಾಯತ ಸಮಾಜ, ವೀರಶೈವ ಲಿಂಗಾಯತ ನೌಕರರ ಸಂಘದಿಂದ ಪಟ್ಟಣದ ಸಂವಿಧಾನ ಸೌಧದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಹೊಳಲ್ಕೆರೆ ತಾಲೂಕಿನಲ್ಲಿ ಅಪ್ಪಿತಪ್ಪಿಯೂ ಒಂದೂ ಅಸ್ಪಶ್ಯತೆ ಪ್ರಕರಣ ಕಂಡು ಬರಬಾರದು. ಎಲ್ಲಿಯೂ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರಗಳು ನಡೆಯಬಾರದು. ಬಸವಣ್ಣ ಅವರ ಕಾಯಕವೇ ಕೈಲಾಸವೆಂಬ ಮಹತ್ವ ಅರಿತು ಆ ತತ್ವದಡಿ ಸಾಗುತ್ತಿರುವ ವೀರಶೈವ ಲಿಂಗಾಯತರು ಪ್ರಾಮಾಣಿಕ, ಪರಿಶುದ್ಧವಾಗಿ ಜೀವಿಸಬೇಕು ಎಂದು ಕಿವಿಮಾತು ಹೇಳಿದರು.
ಸ್ತ್ರೀ-ಪುರುಷ, ಬಡವ-ಬಲ್ಲಿದ, ಮೇಲು-ಕೀಳೆಂಬ ಅಸಮಾನತೆ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿದ 12ನೇ ಶತಮಾನದ ಬಸವಣ್ಣ ಅವರ ಆಚಾರ, ವಿಚಾರ ವಿಶ್ವಕ್ಕೆ ಮಾದರಿಯಾಗಿದ್ದು, ವಿಶಾಲವಾಗಿದೆ. ಅವು ಯಾವೊಂದು ಸಮುದಾಯಕ್ಕೆ ಸೀಮಿತವಲ್ಲ. ಇಡೀ ಮನುಕುಲಕ್ಕೆ ಸಮಾತನೆಯ ಸಂದೇಶ ಸಾರಿದ ಹರಿಕಾರರಾಗಿದ್ದು, ಪುರುಷರಂತೆ ಮಹಿಳೆಯರನ್ನು ಗೌರವದಿಂದ ಕಾಣಿ ಎಂದು ಸಲಹೆ ನೀಡಿದರು.
ವೀರಶೈವ ಲಿಂಗಾಯತರು ಪರಸ್ಪರ ದ್ವೇಷ, ಅಸೂಯೆ, ಭಿನ್ನಾಭಿಪ್ರಾಯ ಬದಿಗಿಟ್ಟು ಇದೇ ರೀತಿ ರಾಜ್ಯದೆಲ್ಲೆಡೆ ಒಗ್ಗಟ್ಟಾಗಿ ಇರಬೇಕು. ಅದರಿಂದ ಸಮುದಾಯಕ್ಕೆ ಅತ್ಯಂತ ಸಂತೋಷವಾಗಲಿದೆ. ಹೊಳಲ್ಕೆರೆಯ ಈ ಸಮಾರಂಭ ಇಡೀ ರಾಜ್ಯಕ್ಕೆ ಮಾದರಿ ಎಂದು ಬಣ್ಣಿಸಿದರು.
ಇತಿಹಾಸ ಸೃಷ್ಟಿಸಿದ ಸಮಾಜ: ಶಾಸಕ ಡಾ.ಎಂ. ಚಂದ್ರಪ್ಪ ಮಾತನಾಡಿ, ರಾಜ್ಯದಲ್ಲಿ ಇತಿಹಾಸ ಸೃಷ್ಟಿಸಿರುವ ಬಹುದೊಡ್ಡ ಸಮಾಜ ಯಾವುದಾದರೂ ಇದ್ದರೆ, ಅದು ವೀರಶೈವ ಲಿಂಗಾಯತರು. ನನ್ನ ಕ್ಷೇತ್ರದಲ್ಲಿ ಈ ಸಮುದಾಯದವರು ಬೇರೆ ಸಮಾಜದವರೊಟ್ಟಿಗೆ ಒಂದೇ ತಾಯಿ ಮಕ್ಕಳಂತೆ ಅನ್ಯೋನ್ಯತೆಯಿಂದ ಬದುಕುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೈಲಾದಷ್ಟು ಸಹಾಯ ಮಾಡುವ ವೀರಶೈವ ಲಿಂಗಾಯತರು ಎಂತಹುದೇ ಸಂದರ್ಭದಲ್ಲೂ ನನ್ನನ್ನು ಕೈಬಿಟ್ಟಿಲ್ಲ. ಉಸಿರಿರುವತನಕ ನಿರ್ವಂಚನೆಯಿಂದ ಈ ಸಮುದಾಯದ ಸೇವೆ ಮಾಡಲು ಬದ್ಧ ಎಂದು ಭರವಸೆ ನೀಡಿದರು.
ಸಮಾನತೆಗಾಗಿ ಶ್ರಮಿಸಿದ ಬಸವಣ್ಣ ವಿಶ್ವ ಮಾನವರಾಗಿದ್ದಾರೆ. ತಮ್ಮ ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ಸಮಾನತೆ ನೀಡಿದ ಮಹನೀಯ. ಆ ಕ್ರಾಂತಿಕಾರಿ ಮಹಾಪುರುಷನ ಪರಿಕಲ್ಪನೆ ಮೇಲೆ ಇಂದಿನ ಸಂಸತ್ ನಿಂತಿದೆ. ವಿಶ್ವಾದ್ಯಂತ ಅವರ ಅನುಯಾಯಿಗಳಿದ್ದಾರೆ ಎಂದರು.
ಭಾವಚಿತ್ರ ಮೆರವಣಿಗೆ ಅದ್ದೂರಿ: ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದಲ್ಲಿ ಶನಿವಾರ ಮಹಾ ಮಾನವತಾವಾದಿ ಬಸವೇಶ್ವರರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಅಲಂಕೃತ ವಾಹನದಲ್ಲಿ ಬಸವೇಶ್ವರರ ಭಾವಚಿತ್ರ ಪ್ರತಿಷ್ಠಾಪಿಸಿದ ನಂತರ ಚಾಲನೆ ದೊರೆಯಿತು. ಬೃಹತ್ ಕೇಸರಿ ಬಾವುಟದೊಳಗೆ ಬಸವಣ್ಣನ ಚಿತ್ರ ರಾರಾಜಿಸಿದವು. ವಿವಿಧ ಜಾನಪದ ಕಲಾತಂಡಗಳು ಮೆರುಗು ನೀಡಿದವು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಧುರಿ ಗಿರೀಶ್, ಮಹಾಸಭಾ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪನವರ್, ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸನ್ನ, ಎಂಎಲ್ಸಿ ಕೆ.ಎಸ್.ನವೀನ್, ಮಾಜಿ ಶಾಸಕ ಪಿ.ರಮೇಶ್, ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ನಾಗರತ್ನ ವೇದಮೂರ್ತಿ, ಮುಖಂಡರಾದ ಹನುಮಲಿ ಷಣ್ಮುಖಪ್ಪ, ಶಶಿಕಲಾ ಮೂರ್ತಿ, ಮಹಡಿ ಶಿವಮೂರ್ತಿ, ಪ್ರಭಾಕರ್ ಮಾಳಿಗೆ, ಹನುಮಂತಪ್ಪ, ಎ.ಕೆ.ರುದ್ರಪ್ಪ, ಜಿ.ಬಿ.ಶೇಖರ್, ಕೆ.ಎಂ.ಶಿವಕುಮಾರ್, ಪಿ.ಎಸ್.ಮೂರ್ತಿ, ಪಿ.ಆರ್.ಶಿವಕುಮಾರ್, ಗಂಗಾಧರ್ ಇತರರಿದ್ದರು.