ಹುಣಸೂರು: ಅಸ್ಪಶ್ಯತೆಯಂತಹ ಅನಿಷ್ಟ ಪದ್ಧತಿ ನಿರ್ಮೂಲನೆಗೆ ದೇಶದ ಕಾನೂನಿನ ಜತೆಗೆ ಸಮಾಜದ ಸಹಕಾರವೂ ಅಗತ್ಯ ಎಂದು ಹುಣಸೂರು ಉಪವಿಭಾಗ ಮಟ್ಟದ ಎಸ್‌ಸಿ/ಎಸ್ಟಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನಿಂಗರಾಜ ಮಲ್ಲಾಡಿ ಅಭಿಪ್ರಾಯಪಟ್ಟರು.
ತಾಲೂಕಿನ ಬಿಳಿಕೆರೆ ಗ್ರಾಮದಲ್ಲಿ ಗುರುವಾರ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬಿಳಿಕೆರೆ ಹೋಬಳಿ ಮಟ್ಟದ ಅಸ್ಪಶ್ಯತಾ ನಿರ್ಮೂಲನಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾವಿರಾರು ವರ್ಷಗಳಿಂದ ನೆಲೆ ನಿಂತಿರುವ ಅಸ್ಪಶ್ಯತೆ ಎಂಬ ಪಿಡುಗನ್ನು ನಿರ್ಮೂಲನೆ ಮಾಡಲು ಕಾನೂನಿನ ಜತೆಗೆ ಸಮುದಾಯಗಳು ಮುಂದಾಗಬೇಕು. ಕಾನೂನಿನ ಪ್ರಕಾರ ಅಸ್ಪಶ್ಯತೆ ನಿಷೇಧಿಸಲ್ಪಟ್ಟರೂ ಇಂದಿಗೂ ಕೆಲವು ಹಳ್ಳಿಗಳಲ್ಲಿ ದಲಿತರಿಗೆ ದೇವಸ್ಥಾನ, ಕ್ಷೌರದ ಅಂಗಡಿ, ಹೊಟೇಲ್‌ಗಳಿಗೆ ನಿರ್ಬಂಧ ಹಾಕಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ವಿಷಾದಿಸಿದರು.
ಬಲಿಷ್ಠವಾದ ಕಾನೂನುಗಳಿದ್ದರೂ ಇಂದಿಗೂ ಅಸ್ಪಶ್ಯತೆ ಜೀವಂತವಾಗಿರಲು ಕಾನೂನು ಜಾರಿಗೆ ತರುವ ಸರ್ಕಾರಿ ಅಧಿಕಾರಿಗಳ ಮನಸ್ಥಿತಿ ಕೂಡ ಕಾರಣವಾಗಿದೆ. ಇಂತಹ ಸಾಮಾಜಿಕ ಸಮಸ್ಯೆಗಳಿಂದ ದಲಿತರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಅಸ್ಪಶ್ಯತೆ ಎಂಬುದು ಮಾನಸಿಕ ರೋಗ. ಇಂದಿಗೂ ಈ ಪದ್ಧತಿ ಕೆಲವು ಕಡೆ ಜೀವಂತವಾಗಿರುವುದು ದುರ್ದೈವ. ನಿರ್ಮೂಲನೆ ಬಗ್ಗೆ ಇತರ ಸಮುದಾಯದ ಜನರು ಹೆಚ್ಚು ಮಾತನಾಡಬೇಕು ಎಂದರು.
ವಕೀಲೆ ಪವಿತ್ರಾ ಲೋಕೇಶ್ ಪರಿಶಿಷ್ಟ ಜಾತಿ / ಪಂಗಡದ ದೌರ್ಜನ್ಯ ನಿಷೇಧ ಕಾಯ್ದೆ., ಮಹಿಳೆಯರ ಸಂರಕ್ಷಣಾ ಕಾಯ್ದೆ, ಅಸ್ಪಶ್ಯತೆ ನಿರ್ಮೂಲನೆ ಕುರಿತ ಕಾನೂನುಗಳು, ಜಿಲ್ಲಾ ಮಕ್ಕಳ ಸಂರಕ್ಷಣಾ ಇಲಾಖೆಯ ರಘು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಶೋಷಣೆಗಳ ಬಗ್ಗೆ ಮಾಹಿತಿ ನೀಡಿದರು.
ಸಮಾಜ ಕಲ್ಯಾಣಾಧಿಕಾರಿ ಅಶೋಕ್ ಕುಮಾರ್, ಬಿಳಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾಯಮ್ಮ, ಚಲ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ಚನ್ನಮ್ಮ, ಹಳೇಬೀಡು ಗ್ರಾಪಂ ಅಧ್ಯಕ್ಷ ಮಲ್ಲೇಶ್, ಮುಖಂಡರಾದ ಶಿವಶಂಕರ್, ಮಹೇಶ್, ಪಿಡಿಒಗಳಾದ ಎಚ್.ಜಿ.ಮಹದೇವಸ್ವಾಮಿ, ರಾಮಣ್ಣ, ರೂಪಶ್ರೀ, ಪಿಡಿಒ ಮಂಜುಳಾ, ಯಶೋದಾ, ನವೀನ್, ಕೆಂಪರಾಜು, ಕೃಷ್ಣ, ರಾಚಯ್ಯ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಪಾಲ್ಗೊಂಡಿದ್ದರು.