ಮಳವಳ್ಳಿ: ನಾನೇ ಶುದ್ಧ ಉಳಿದವರೆಲ್ಲರೂ ಅಶುದ್ಧ ಎಂದು ಹೇಳುವುದು ರಾಕ್ಷಸ ಧರ್ಮವಾಗಿದ್ದು, ಭರತ ಖಂಡದಲ್ಲಿ ಧರ್ಮವೇ ಉಳಿದಿಲ್ಲವೆಂದು ಸ್ವಾಮಿ ವಿವೇಕಾನಂದರು ತಿಳಿಸಿದ್ದರು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ಎಲ್. ಭರತ್‌ರಾಜ್ ಹೇಳಿದರು.
ಪಟ್ಟಣದ ವಿಶ್ವಮಾನವ ವಿಚಾರ ವೇದಿಕೆ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಹಸಿದವನಿಗೆ ಒಂದು ತುತ್ತನ್ನು ಕೊಡದವರು ಮೋಕ್ಷವನ್ನು ಹೇಗೆ ಕೊಟ್ಟಾರು? ಮತ್ತೊಬ್ಬರ ಉಸಿರಿನ ಸೋಕಿದಾಗಲೇ ಇವರು ಪಾಪಿಗಳಾಗುವುದಿದ್ದರೆ ಇನ್ನೊಬ್ಬರನ್ನು ಹೇಗೆ ಶುದ್ಧಿ ಮಾಡಿಯಾರು ಎಂದರು.
ವಿವೇಕಾನಂದರ ಆದರ್ಶ, ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆ ಅಧ್ಯಯನ ಮಾಡಿ ಬದುಕಿನ ಮೌಲ್ಯಗಳನ್ನು ಅರಿತುಕೊಳ್ಳಬೇಕೆಂದು ಕರೆನೀಡಿದರು. ವಿಚಾರ ವೇದಿಕೆ ಅಧ್ಯಕ್ಷ, ಸಾಹಿತಿ ಮ.ಸಿ. ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಯೋಗ ಗುರು ಮಲ್ಲಿಕಾರ್ಜುನಸ್ವಾಮಿ, ವಕೀಲೆ ಅಕ್ಷತಾ, ಉಪನ್ಯಾಸಕ ರಘು, ಸಂಘಟನೆ ಮುಖಂಡರಾದ ಗುರುಸ್ವಾಮಿ, ಶಿವಕುಮಾರ್, ಸತೀಶ್, ಎನ್. ಲಿಂಗರಾಜಮೂರ್ತಿ ಇದ್ದರು.