ನೆಲಮಂಗಲ: ಸಮಾಜದಲ್ಲಿ ಅಸಹಾಯಕರಿಗೆ ಆಸರೆಯಾಗುವ ಕೆಲಸವನ್ನು ಸಂಘಟನೆಗಳು ಮಾಡಬೇಕಿದೆ ಎಂದು ಚಿತ್ರದುರ್ಗ ಮಹಾಸಂಸ್ಥಾನ ಮಠದ ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ತಿಳಿಸಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಸೋಮವಾರ ರಾಜ್ಯ ದಲಿತ ಕೂಲಿ ಮತ್ತು ಕಾರ್ಮಿಕರ ಸಂಘಟನೆ, ಕಲಾಗಂಗಾ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಲಾಸೌರಭ, ಡಾ.ಅಂಬೇಡ್ಕರ್ ಪರಿನಿರ್ವಾಣ ದಿನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಭೆ ಇದ್ದವರಿಗೆ ಮಾತ್ರ ಸಮಾಜದಲ್ಲಿ ಪುರಸ್ಕಾರ ದೊರೆಯಲಿದೆ. ಪುರಸ್ಕೃತ ವಿದ್ಯಾರ್ಥಿಗಳ ಗುರಿ ಉತ್ತಮ ಭವಿಷ್ಯ ರೂಪಿಸಿಕೊಳ್ಳವುದಾಗಿರಬೇಕು. ಸಮಾಜದ ಎಲ್ಲ ವರ್ಗಗಳಲ್ಲಿನ ಪ್ರತಿಭಾವಂತರನ್ನು ಒಂದೆಡೆ ಸೇರಿಸುವುದು ಸುಲಭದ ಕೆಲಸವಲ್ಲ. ಪರಸ್ಪರ ಸಹಕಾರ ಸಹಬಾಳ್ವೆಯಂತಹ ಭಾವೈಕ್ಯತೆ ಸಂದೇಶ ಸಾರುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿರುವ ಸಂಘಟನೆಯ ಚಿಂತನೆ ಎಲ್ಲರಿಗೂ ಮಾದರಿ ಎಂದರು.
ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸಿಕ್ಕ ಅವಕಾಶ ಉಪಯೋಗಿಸಿಕೊಂಡು ಉತ್ತಮ ಪ್ರಜೆಯಾಗಿ ಹೊರಹೊಮ್ಮಬೇಕು. ಡಾ.ಅಂಬೇಡ್ಕರ್ ಅವರ ತತ್ವಾದರ್ಶ ಮೈಗೂಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು ಎಂದರು.
ಬಿಜೆಪಿ ಉಪಾಧ್ಯಕ್ಷ ಜಗದೀಶ್‌ಚೌಧರಿ ಮಾತನಾಡಿ, ಸಮಾಜದ ಏಳಿಗೆಯಲ್ಲಿ ಸಂಘ-ಸಂಸ್ಥೆಗಳು ಮಹತ್ವದ ಪಾತ್ರವಹಿಸಿವೆ. ಸಂಘಟನೆಯಿಂದ ದಲಿತ ಕೂಲಿಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಮಾಡಿ ನ್ಯಾಯ ಒದಗಿಸುವ ಜತೆಗೆ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಪುರಸ್ಕಾರ, ಪುಸ್ತಕ ಬಿಡುಗಡೆ: ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಾಹಿತಿ ಮಣ್ಣೆಮೋಹನ್ ರಚಿತ ನಮ್ಮ ನುಡವಿನ ಸಾಧಕರು ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು.
ಬೆಳ್ಳಿರಥ ಮೆರವಣಿಗೆ: ತಾಲೂಕು ಕಚೇರಿ ಬಳಿಯಿಂದ ಬೆಳ್ಳಿರಥದಲ್ಲಿ ಆರಂಭಗೊಂಡ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆಗೆ ತಹಸೀಲ್ದಾರ್ ಕೆ.ಮಂಜುನಾಥ್ ಚಾಲನೆ ನೀಡಿದರು. ಪವಾಡ ಶ್ರೀ ಬಸವಣ್ಣ ದೇವರ ಮಠದವರೆಗೂ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ವಾಜರಹಳ್ಳಿ ಗ್ರಾಪಂ ಅಧ್ಯಕ್ಷೆ ಮಂಜಮ್ಮ, ಸಂಘಟನೆ ಪ್ರಧಾನ ಕಾರ್ಯದರ್ಶಿ ಆರ್.ಪ್ರಸಾದ್, ತಾಲೂಕು ಕಾರ್ಯಾಧ್ಯಕ್ಷ ಮುನಿಆಂಜಿನಪ್ಪ, ಸಂಚಾಲಕ ನರಸಿಂಹಮೂರ್ತಿ, ನಮ್ಮ ಕರ್ನಾಟಕ ಜನಸೈನ್ಯ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಬಿ.ನರಸಿಂಹಯ್ಯ, ಅಧ್ಯಕ್ಷ ವಾಜನರಹಳ್ಳಿ ನವೀನ್ ಮತ್ತಿತರರಿದ್ದರು.