ಜಿಲ್ಲೆ

ಅಸಹಾಯಕ ಸ್ಥಿತಿಯಲ್ಲಿ ವಿಶ್ವವಿದ್ಯಾಲಯಗಳು

ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ಕುವೆಂಪು, ಬೇಂದ್ರೆ, ಶಿವರಾಮಕಾರಂತ ಹಾಗೂ ಇನ್ನಿತರೆ ಸಾಹಿತಿಗಳಂತವರನ್ನು ಹುಟ್ಟು ಹಾಕಲು ವಿಲವಾಗಿರುವ ವಿಶ್ವ ವಿದ್ಯಾಲಯಗಳು ಅಸಹಾಯಕ ಸ್ಥಿತಿಯನ್ನು ತಲುಪಿದೆ ಎಂದು ಸಂಸ್ಕೃತಿ ಚಿಂತಕ ಡಾ.ಕೃಷ್ಣಮೂರ್ತಿ ಹನೂರು ಆತಂಕ ವ್ಯಕ್ತಪಡಿಸಿದರು.

ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ರೋಟರಿ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಚಾಮರಾಜನಗರ ಜಿಲ್ಲಾ ಲೇಖಕರ ಸಂಘದ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಬರೆಯೋದು ಸುಲಭ, ಆದರೇ ಎಲ್ಲರೂ ಓದುವಂತೆ ಬರೆಯುವುದು ಬಹಳ ಕಷ್ಟ. ನಾವು ಬರೆಯುವ ಬರಹವನ್ನು ನಾವೇ ಹೊರಹಚ್ಚಬೇಕಿರುತ್ತದೆ. ಬರೆಯುವುದಕ್ಕೆ ಅನುಭವ ಅಗತ್ಯವಾಗಿದೆ. ಜಿಲ್ಲೆಯ ಮಹದೇಶ್ವರ ಮತ್ತು ಮಂಟೇಸ್ವಾಮಿ ಮಹಾಕಾವ್ಯ ಅತ್ಯಂತ ಮಹತ್ವಾದ ಕಾವ್ಯವಾಗಿದೆ. ಅನಕ್ಷರಸ್ಥರು ಕಟ್ಟಿದ ಈ ಕಾವ್ಯಗಳು ಅಧಿಕಾರ ಮತ್ತು ಅಹಂಕಾರವನ್ನು ಮುರಿಯುವ ಬಹುದೊಡ್ಡ ಕಾವ್ಯವಾಗಿದೆ. ರಾಜ್ಯದಲ್ಲಿ ಕನ್ನಡದ ಶಕ್ತಿ ದೊಡ್ಡದಾಗಿದೆ. ಕನ್ನಡವನ್ನು ಕಲಿಸುವವರು, ಕಲಿಯುವವರ ಸಂಖ್ಯೆ ಕಡಿಮೆ ಆಗಿರಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ ಎಂದರು.

ವಿಶ್ವವಿದ್ಯಾಲಯಗಳು ಅಸಹಾಯಕವಾಗಿದ್ದು, ವಿದ್ವಾಂಸರ ಕೊರತೆ ಕಾಡುತ್ತಿದೆ. ಬಹುದೊಡ್ಡ ಖಾಸಗಿ ಕಾಲೇಜುಗಳು ಪ್ರದರ್ಶನದ ಮಾಲ್ಗಳಾಗಿವೆ. ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮ ಕಲಿಸಲು ಚರ್ಚೆನಡೆಯುತ್ತಿರುವ ಕಾಲದಲ್ಲಿ ನಮ್ಮ ಮಕ್ಕಳು ಯಾವ ರೀತಿಯ ಶಿಕ್ಷಣ ಪಡೆಯಬಹುದು ಎಂಬ ಆತಂಕ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯವನ್ನು ಕಟ್ಟುವಂತಹ ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ಹೇಳಿದರು.

ಜಿಲ್ಲಾ ಲೇಖಕರ ಸಂಘದ ಕಾರ್ಯದರ್ಶಿ ಬಿಸಲವಾಡಿ ಸೋಮಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಇರುವ ಸಾಹಿತಿಗಳನ್ನು ಈ ಸಂಘದ ಒಳಗಡೆ ತಂದು ಸಾಹಿತ್ಯವನ್ನು ಕಟ್ಟುವ ಕೆಲಸವನ್ನು ಮಾಡುವ ಉದ್ದೇಶದಿಂದ ಈ ಸಂಘವನ್ನು ಸ್ಥಾಪನೆ ಮಾಡಲಾಗಿದೆ. ಜಿಲ್ಲೆಯನ್ನು ಪ್ರತಿನಿಧಿಸುವ ಸಾಹಿತಿಗಳು ಇದಕ್ಕೆ ಸದಸ್ಯರಾಗಿರುತ್ತಾರೆ. ಲೇಖಕರನ್ನು ಹೆಚ್ಚಿನ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲು ಹಾಗೂ ಅವರಿಗೆ ನೆರವಾಗುವ ನಿಟ್ಟಿನಲ್ಲಿ ಈ ಸಂಘವನ್ನು ಹುಟ್ಟು ಹಾಕಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಜಿ.ಎಸ್.ಜಯದೇವ್ ಅವರು, ಸಾಹಿತಿ ಶಂಕರ ಸಿ.ಅಂಕನಶೆಟ್ಟುಪುರ ರಚನೆಯ ‘ಕನ್ನಡಿ’ ಕವನ ಸಂಕಲನ ಮತ್ತು ಸೋಮಶೇಖರ ಬಿಸಲವಾಡಿ ಅವರ ವಿಮೋಚಕರು ಕೃತಿಗಳನ್ನು ಮರು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ನಾಗರಾಜು, ಕಥೆಗಾರರಾದ ಶೀಲಾ ಸತ್ಯೇಂದ್ರಸ್ವಾಮಿ, ಚಾಮರಾಜನಗರ ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ರೇಚಂಬಳ್ಳಿ ದುಂಡು ಮಾದಯ್ಯ,ಖಜಾಂಚಿ ಗು.ಚಿ.ರಮೇಶ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.