ಕಾನಹೊಸಹಳ್ಳಿ: ನಿಜಶರಣ ಅಂಬಿಗರ ಚೌಡಯ್ಯ ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿ ಜಡ್ಡುಗಟ್ಟಿದ ಆಸಮಾನತೆ ವಿರುದ್ಧ ದ್ವನಿ ಎತ್ತುವುದರೊಂದಿಗೆ ವರ್ಣ ವ್ಯವಸ್ಥೆ ಕುರಿತ ವಿರೋಧವನ್ನು ವಚನಗಳ ಮೂಲಕ ಜಗತ್ತಿಗೆ ಸಾರಿದ್ದರು ಎಂದು ಕಂದಾಯ ನಿರೀಕ್ಷಕ ಎಚ್.ಸಿದ್ದಪ್ಪ ತಿಳಿಸಿದರು.
ಗ್ರಾಮದ ನಾಡಕಚೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಬಸವಾದಿ ಶರಣರ ಪೈಕಿ ಅಂಬಿಗರ ಚೌಡಯ್ಯ ಭಿನ್ನವಾಗಿ ಕಾಣುತ್ತಾರೆ. ಸಮಸಮಾಜಕ್ಕಾಗಿ ಹಂಬಲಿಸುತ್ತಾ ಅಂದಿನ ವ್ಯವಸ್ಥೆ ವಿರುದ್ಧ ನೇರ ಮತ್ತು ನಿಷ್ಠುರವಾಗಿ ಮಾತನಾಡುವ ಛಾತಿ ಚೌಡಯ್ಯ ಅವರಲ್ಲಿತ್ತು. ಚೌಡಯ್ಯ ಅವರ ಚಿಂತನೆ ಹೋರಾಟಗಾರರಿಗೆ ಸ್ಫೂರ್ತಿಯಾಗಿವೆ. ಅಸಮಾನತೆ ವಿರುದ್ಧದ ಧ್ವನಿಯಾಗಿದ್ದ ಅಂಬಿಗರ ಚೌಡಯ್ಯ ಅವರನ್ನು ಬಂಡಾಯ ವಚನಕಾರ ಎಂದು ಕರೆಯಬಹುದಾಗಿದೆ ಎಂದರು.
ಉಪ ತಹಸೀಲ್ದಾರ್ ಚಂದ್ರಮೋಹನ್ ಮಾತನಾಡಿ, ಅಂಬಿಗರ ಚೌಡಯ್ಯ ಅವರ ಚಿಂತನೆಗಳು ಸಮಾಜಮುಖಿಯಾಗಿದ್ದವು. ಅಂದಿನ ಮೌಢ್ಯ ಮತ್ತು ಅನಿಷ್ಠ ಪದ್ಧತಿಗಳನ್ನು ವಚನಗಳ ಮೂಲಕ ಟೀಕಿಸದವರ ಪೈಕಿ ಚೌಡಯ್ಯ ಮೊದಲಿಗರಾಗಿದ್ದಾರೆ ಎಂದರು.
ಕಂದಾಯ ಇಲಾಖೆ ಸಿಬ್ಬಂದಿ ಅನೀತಾ ಪೂಜಾರಿ, ಕೊಟ್ರೇಶ್, ಶ್ರೀನಿವಾಸ್ ಕೊಂಡಿ, ದೇವೇಂದ್ರನಾಯ್ಕ, ಇಮ್ರಾನ್, ಚನ್ನಬಸಯ್ಯ, ಮಮತಾ, ಸಂಪ್ರೀತಾ, ಅಂಬುಜಾಕ್ಷಿ, ಅಗ್ರಹಾರ ಮಂಜುನಾಥ, ಕೆ.ಸಿದ್ದೇಶ್, ಹನುಮಂತಪ್ಪ ಕುಂಬಾರ, ರುದ್ರೇಶ್ ಇತರರಿದ್ದರು.