ಜಿಲ್ಲೆ

ಅಸಮರ್ಥ ಸರ್ಕಾರದ ಸಮಾವೇಶ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಎರಡು ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ರಾಜ್ಯದ ಅಸಮರ್ಥ ಸರ್ಕಾರವೊಂದು ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡಲು ಹೊರಟಿದೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಹಣ ಲೂಟಿ ಮಾಡಿದ್ದೇ ಈ ಸರ್ಕಾರದ ಸಾಧನೆ. ಜನರಿಗೆ ಅನುಕೂಲವಾಗುವ ಯಾವುದೇ ಕೆಲಸವನ್ನು ಈ ಸರ್ಕಾರ ಮಾಡಿಲ್ಲ. ರಾಜ್ಯದ ಆರ್ಥಿಕ ಅಭಿವೃದ್ಧಿ ಹಾಗೂ ಬಡವರ ಬಗ್ಗೆ ದೂರದೃಷ್ಟಿ ಇಲ್ಲದ ಸರ್ಕಾರ ಇದೆ ಎಂದು ಆರೋಪಿಸಿದರು.

ಜಿಡಿಪಿ (ನಿವ್ವಳ ಆಂತರಿಕ ಉತ್ಪನ್ನ)ಯಲ್ಲಿ ಸಾಲದ ಪ್ರಮಾಣ ಶೇ. 3ಕ್ಕಿಂತ ಹೆಚ್ಚು ಇರಬಾರದು. ಇದಕ್ಕಿಂತ ಹೆಚ್ಚು ಸಾಲ ಮಾಡುವ ಪರಿಸ್ಥಿತಿ ತಂದಿಟ್ಟಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ಆದಾಯ ಸಂಗ್ರಹದಲ್ಲಿ ರಾಜ್ಯ ಸರ್ಕಾರ 18,000 ಕೋಟಿ ರೂ. ಕೊರತೆ ಎದುರಿಸಿದೆ ಎಂದರು.

ಸಿಮ್ ಮಾರಾಟ ಹೆಚ್ಚಳ:

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮೇ 2ರಿಂದ 10ರವರೆಗೆ ಸಿಮ್ ಮಾರಾಟ ಗಣನೀಯವಾಗಿ ಹೆಚ್ಚಿದೆ. ದೇಶ ವಿರೋಧಿ, ಅಕ್ರಮ ಚಟುವಟಿಕೆಗಳಿಗೆ ಬಳಕೆ ಮಾಡಲು ಖರೀದಿ ಮಾಡಿರುವ ಶಂಕೆ ಇದೆ. ಕೆಲವರು ಬೇರೆ ಬೇರೆ ಹೆಸರಿನಲ್ಲಿ 4-5 ಸಿಮ್ ಗಳನ್ನು ಖರೀದಿ ಮಾಡಿದ್ದಾರೆ. ಈ ಕುರಿತು ಹು-ಧಾ ಪೊಲೀಸ್​ರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಹಳಷ್ಟು ಜನ ಹುಬ್ಬಳ್ಳಿಯ ಮಸೀದಿ, ಮದರಸಾಗಳಿಗೆ ಬಂದಿದ್ದಾರೆ ಎಂದು ನನಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಅಪರಿಚಿತ ಮುಖಗಳೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದರು. ನಾನು ಈ ವಿಷಯವನ್ನು ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದೆ, ಸ್ಥಳೀಯರ ಸಂಪರ್ಕ ಸಂಖ್ಯೆಯನ್ನು ನೀಡಿದ್ದೆ. ಸ್ಲೀಪರ್ ಸೆಲ್ ಆಕ್ಟಿವೇಟ್ ಆಗಿರುವ ಸಾಧ್ಯತೆಗಳ ಬಗ್ಗೆ ಗೃಹ ಸಚಿವರಿಗೂ ಪತ್ರ ಬರೆದು ವಾರವಾದರೂ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು.