ಪಾಂಡವಪುರ: ತಾಲೂಕು ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷರಾಗಿ ನೇಮಕಗೊಂಡಿರುವ ಹರಳಹಳ್ಳಿ ಲೋಕೇಶ್ ಅವರಿಗೆ ಜಿಲ್ಲಾಧ್ಯಕ್ಷ ಗುರುರಾಜು ನೇಮಕಾತಿ ಆದೇಶ ಪತ್ರ ವಿತರಿಸಿದರು.
ನಂತರ ಮಾತನಾಡಿದ ಗುರುರಾಜು, ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿಯೂ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷರ ನೇಮಕಾತಿ ಮಾಡಲಾಗುತ್ತಿದೆ. ನೂತನ ಅಧ್ಯಕ್ಷರು ತಮ್ಮ ಸೇವಾವಧಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ ಆಸರೆಯಾಗಿ ನಿಲ್ಲುವ ಜತೆಗೆ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಒತ್ತು ನೀಡಿ ಕೆಲಸ ಮಾಡಬೇಕು ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನುಡಿದಂತೆ ನಡೆದ ಸರ್ಕಾರ: ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಚಿನಕುರಳಿ ರಮೇಶ್ ಮಾತನಾಡಿ, ಚುನಾವಣೆ ವೇಳೆ ರಾಜ್ಯದ ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಡೇರಿಸುವ ಮೂಲಕ ದೇಶದಲ್ಲಿಯೇ ನುಡಿದಂತೆ ನಡೆದ ಸರ್ಕಾರ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಎಂದು ಹೇಳಿದರು.
ಸರ್ಕಾರ ರಚನೆಯಾಗಿ ಮೂರು ತಿಂಗಳು ಸಮೀಪಿಸುತ್ತಿದೆ. ಕಡಿಮೆ ಅವಧಿಯಲ್ಲೇ 52 ಸಾವಿರ ಕೋಟಿ ರೂ.ಗಳ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಆ ಮೂಲಕ ರಾಜ್ಯದ ಎಲ್ಲ ವರ್ಗಗಳ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದರು.
ಗೆಲುವಿಗೆ ಶ್ರಮಿಸಿ: ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪಕ್ಷದ ಕಾರ್ಯಕರ್ತರು ಹಾಗೂ ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶ್ರಮಿಸಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ 135 ಸ್ಥಾನಗಳನ್ನು ನೀಡುವ ಮೂಲಕ ಬಹುಮತದೊಂದಿಗೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗಾಗಿ ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲೂ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ವಿಶ್ವಾಸ ಇದೆ. ಹೀಗಾಗಿ ಕಾರ್ಯಕರ್ತರು ಹಗಲಿರುಳು ಶ್ರಮಿಸಿ ಪಕ್ಷ ದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.
ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾ ಕಾರ್ಯದರ್ಶಿ ಜುಫ್ರುಲ್ಲಾ, ಉಪಾಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಹರಳಹಳ್ಳಿ ಲೋಕೇಶ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಂತನಹಳ್ಳಿ ಬಸವರಾಜು, ಮುಖಂಡರಾದ ಉಮ್ಮಡಹಳ್ಳಿ ನಾಗೇಶ್, ಹರಳಹಳ್ಳಿ ಸಿದ್ದಲಿಂಗಯ್ಯ, ಮಹ್ಮದ್ ಹನೀಫ್ (ಪಾಪು), ಎಸ್.ಟಿ.ದೊಡ್ಡವೆಂಕಟಯ್ಯ, ಸತ್ಯೇಂದ್ರಕುಮಾರ್, ಕೋ.ಪು.ಗುಣಶೇಖರ್
ಕೆನ್ನಾಳು ಶಂಕರ್, ಪುರಸಭೆ ಸದಸ್ಯ ಕೆ.ಉಮಾಶಂಕರ್, ಜಿಲ್ಲಾ ಮಾಧ್ಯಮ ಸಂಯೋಜಕ ಎನ್.ಕೃಷ್ಣೇಗೌಡ ಇತರರಿದ್ದರು.