ಜಿಲ್ಲೆ

ಅಸಂಘಟಿತ ಕಾರ್ಮಿಕರ ಪ್ರತಿಭಟನೆ

ಮಳವಳ್ಳಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಕಾರ್ಮಿಕ ನಿರೀಕ್ಷಕರ ಕಚೇರಿ ಎದುರು ಗುರುವಾರ ಸಿಐಟಿಯು ಸಂಘಟನೆ ಸಹಯೋಗದಲ್ಲಿ ಅಸಂಘಟಿತ ಕಾರ್ಮಿಕರು ಪ್ರತಿಭಟನೆ ನಡೆಸಿದರು.


ಸಿಐಟಿಯು ರಾಜ್ಯ ಕಾರ್ಯದರ್ಶಿ ಜಿ.ರಾಮಕೃಷ್ಣ ಮಾತನಾಡಿ, 10 ಲಕ್ಷ ರೂ.ಗಳಿಗಿಂತಲೂ ಹೆಚ್ಚಿನ ಸರ್ಕಾರದ ಕಟ್ಟಡ ಮತ್ತು ಖಾಸಗಿ ಕಾಮಗಾರಿಗಳಿಗೆ ಶೇ.2ರಷ್ಟು ಕಾರ್ಮಿಕ ಕಲ್ಯಾಣ ನಿಧಿಗೆ ಸಂಗ್ರಹಿಸಲು ನಿಯಮವಿದೆ. ಅದರಂತೆ ರಾಜ್ಯ ಕಲ್ಯಾಣ ಮಂಡಳಿಯಲ್ಲಿ 10 ಸಾವಿರ ಕೋಟಿ ರೂ. ಸೆಸ್ ಜಮೆ ಆಗಿದೆ. ಆದರೆ ಈ ಹಣವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಬಳಕೆ ಮಾಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.
ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಘೋಷಿಸಲಾದ ಪರಿಹಾರ ಕಾರ್ಮಿಕರ ಖಾತೆಗಳಿಗೆ ಜಮಾ ಆಗಿಲ್ಲ. ಕಟ್ಟಡ ಕಾರ್ಮಿಕರ ಪಿಂಚಣಿಯನ್ನು ಕನಿಷ್ಠ 5 ಸಾವಿರ ಮತ್ತು ಕುಟುಂಬ ಪಿಂಚಣಿಯನ್ನು 3 ಸಾವಿರ ರೂ. ಜಾರಿ ಮಾಡಬೇಕು. ಕಾರ್ಮಿಕರು ಸೌಲಭ್ಯಗಳಿಗಾಗಿ ಸಲ್ಲಿಸಲಾದ ಅರ್ಜಿಗಳು ತಿರಸ್ಕೃತಗೊಂಡಾಗ ಮರು ಸಲ್ಲಿಸಲು ಮೇಲ್ಮನವಿ ಸಮಿತಿ ರಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಕಾರ್ಮಿಕ ನಿರೀಕ್ಷಕಿ ಅನಿತಾ ಅವರಿಗೆ ಮನವಿ ಸಲ್ಲಿಸಲಾಯಿತು.


ಸಂಘಟನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ, ಮಹದೇವಮ್ಮ, ಬಿ. ಮಂಟೇಸ್ವಾಮಿ, ಶಿವಮ್ಮ, ನಾರಾಯಣ, ಕುಮಾರಸ್ವಾಮಿ, ಮಾದಪ್ಪ ಇತರರಿದ್ದರು.

ಮಳವಳ್ಳಿಯಲ್ಲಿ ಅಸಂಘಟಿತ ಕಾರ್ಮಿಕರು ಪ್ರತಿಭಟನೆ ನಡೆಸಿ ಕಾರ್ಮಿಕ ನಿರೀಕ್ಷಕಿ ಅನಿತಾ ಅವರಿಗೆ ಮನವಿ ಸಲ್ಲಿಸಿದರು. ಸಂಘಟನೆಯ ಜಿ.ರಾಮಕೃಷ್ಣ, ತಿಮ್ಮೇಗೌಡ, ಮಹದೇವಮ್ಮ, ಬಿ. ಮಂಟೇಸ್ವಾಮಿ, ಶಿವಮ್ಮ, ನಾರಾಯಣ, ಕುಮಾರಸ್ವಾಮಿ, ಮಾದಪ್ಪ ಇದ್ದರು.