ಮದ್ದೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಅವರು ಅವಹೇಳನಕಾರಿಯಾಗಿ ಮಾತನಾಡಿರುವುದು ತರವಲ್ಲ. ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಆಗ್ರಹಿಸಿದರು.
ತಾಲೂಕಿನ ಕೊಪ್ಪ ಹೋಬಳಿಯ ಬೆಕ್ಕಳಲೆ ಸೇರಿದಂತೆ ವಿವಿಧ ಗ್ರಾಮದಲ್ಲಿ ಶನಿವಾರ ಸಂಚಾರ ನಡೆಸಿ ನಂತರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಟಿಪ್ಪು ಸುಲ್ತಾನ್ ಅವರನ್ನು ಕೊಂದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಬೇಕು ಎಂದು ಹೇಳಿಕೆ ನೀಡುವ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅವಮಾನ ಮಾಡಿದ್ದಾರೆ. ಪಕ್ಷದ ಕೇಂದ್ರ ಹಾಗೂ ರಾಜ್ಯ ನಾಯಕರು ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಬಹಿರಂಗಪಡಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಳೆದ ಐದು ವರ್ಷಗಳಲ್ಲಿ ಸರ್ಕಾರ ಅಕ್ಕಿ ಕಡಿತ ಮಾಡಿ ಬಡವರ ಹೊಟ್ಟೆ ಮೇಲೆ ಹೊಡೆದಿದೆ. ಬೈಸಿಕಲ್ ಮತ್ತು ವಿದ್ಯಾರ್ಥಿ ವೇತನ ನೀಡದೆ ವಿದ್ಯಾರ್ಥಿಗಳನ್ನು ವಂಚಿಸಿದೆ. ಯಾರೊಬ್ಬರಿಗೂ ಆಶ್ರಯ ಮನೆ ಸಿಕ್ಕಿಲ್ಲ. ಮೂರು ನಾಲ್ಕು ತಿಂಗಳಿಗೊಮ್ಮೆ ಹಾಲಿನ ಸಬ್ಸಿಡಿ ನೀಡಲಾಗುತ್ತಿದೆ. ಕೆಆರ್‌ಎಸ್ ಜಲಾಶಯದಿಂದ ಸರಿಯಾಗಿ ರೈತರ ಬೆಳೆಗಳಿಗೆ ನೀರು ದೊರೆಯುತ್ತಿಲ್ಲ. ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಂಡು ಜನರ ಕಣ್ಣೊರೆಸುವ ಬಜೆಟ್ ಮಂಡಿಸಿರುವ ಸರ್ಕಾರವನ್ನು ಕಿತ್ತೊಗೆಯಲು ಜನರು ತೀರ್ಮಾನ ಮಾಡಬೇಕು ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಹಿರಿಯ ಮಹಿಳೆಗೆ 2 ಸಾವಿರ ರೂ. ನೀಡುತ್ತೇವೆ. 10 ಕೆ.ಜಿ ಉಚಿತ ಅಕ್ಕಿ, 5 ಲಕ್ಷದವರೆಗೆ ರೈತರಿಗೆ ಯಾವುದೇ ಷರತ್ತಿಲ್ಲದೆ ಸಾಲ ವಿತರಣೆ, ಹಾಲಿನ ಸಬ್ಸಿಡಿ ದರ ಹೆಚ್ಚಳ, ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ, ಪ್ರತಿ ಬಿಪಿಎಲ್ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಸಿ.ಜೋಗಿಗೌಡ, ಚಿತ್ರನಟ ಸಚಿನ್ ಚಲುವರಾಯಸ್ವಾಮಿ, ಮನ್‌ಮುಲ್ ಮಾಜಿ ನಿರ್ದೇಶಕ ಕುಮಾರ್ ಕೊಪ್ಪ, ತಾಪಂ ಮಾಜಿ ಉಪಾಧ್ಯಕ್ಷ ಬಿ.ಎಂ.ರಘು, ಸದಸ್ಯ ತೋಯಜಾಕ್ಷ, ಜಿಪಂ ಮಾಜಿ ಸದಸ್ಯ ಪ್ರಸನ್ನ, ನಿವೃತ್ತ ಜಿಲ್ಲಾಧಿಕಾರಿ ಕರಿಗೌಡ, ರಮೇಶ್ ಕೊಪ್ಪ, ಕೆ.ಜಿ.ಮೋಹನ ಇತರರಿದ್ದರು.