ಜಿಲ್ಲೆ

ಅಶಾಂತಿ ಸೃಷ್ಟಿಸಲು ಮುಸ್ಲಿಮರ ಮೀಸಲಾತಿ ರದ್ದು: ಬನವಾಸೆ ರಂಗಸ್ವಾಮಿ

ಹಾಸನ : ಬಿಜೆಪಿ ಸರ್ಕಾರ ಮುಸಲ್ಮಾನರ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದರೆ ಇತ್ತ ಹಾಸನದಲ್ಲಿ ಸ್ಥಳೀಯ ಶಾಸಕರು ಅವರ ಓಲೈಕೆಗೆ ಮುಂದಾಗುವ ಮೂಲಕ ಚುನಾವಣಾ ಗಿಮಿಕ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಟೀಕಿಸಿದರು.

ಮುಸಲ್ಮಾನ್ ಬಾಂಧವರಿಗೆ ಇದ್ದಂತಹ ಶೇ. 4 ಮೀಸಲಾತಿಯನ್ನು ದಿಢೀರನೆ ರದ್ದುಪಡಿಸಿ, ರಾಜ್ಯದಲ್ಲಿ ಅಶಾಂತಿ ಮೂಡಿಸಿ ಗಲಭೆ ಸೃಷ್ಟಿಸಲು ಸರ್ಕಾರವೇ ಮುಂದಾಗುತ್ತಿದೆ. ಆದರೆ ಶಾಸಕ ಪ್ರೀತಂಗೌಡ ಅವರು ಇದೇ ಮುಸಲ್ಮಾನರ ಮತಗಳನ್ನು ಪಡೆಯಲು ನಾನಾ ಕಸರತ್ತು ಮಾಡುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಪ್ರೀತಂಗೌಡ ಅವರು ಜಿಲ್ಲೆಗೆ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ. 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಸವಾಲು ಹಾಕಿರುವ ಅವರು ರಾತ್ರೋರಾತ್ರಿ ಮುಸ್ಲಿಮರ ಮನೆಗಳಿಗೆ ಕಿಟ್‌ಗಳನ್ನು ನೀಡುತ್ತಿದ್ದಾರೆ. ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಲೇವಡಿ ಮಾಡಿದರು.

ಚಿಕ್ಕಮಗಳೂರಿನ ಸಿಟಿ ರವಿ ಧರ್ಮ -ಧರ್ಮಗಳ ನಡುವೆ ದ್ವೇಷ, ಅಸೂಯೆ ಬಿತ್ತುತ್ತಿದ್ದಾರೆ. ಅವರ ಶಿಷ್ಯ ಪ್ರೀತಂಗೌಡರು ಮತದಾರರಿಗೆ ಆಸೆ ಆಮಿಷಗಳನ್ನು ತೋರಿಸುತ್ತಿದ್ದಾರೆ. ಮಹಿಳೆಯರಿಗೆ ದೇವರ ಹೆಸರಿನಲ್ಲಿ ಉಡುಗೊರೆ ನೀಡಿ ರಾಜಕೀಯ ಮಾಡಲು ಹೊರಟಿರುವ ಇವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಹಾಸನ ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳು ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ. ಇವರು ಯಾರದ್ದೋ ಕಪಿಮುಷ್ಠಿಗೆ ಸಿಲುಕಿ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಹೇಂದರ್, ಉಮೇಶ್, ಫಾಜಲ್, ಮುಬ್ಬಶೀರ್ ಅಹಮದ್, ಅನಂತ್ ಕುಮಾರ್ ಹಾಜರಿದ್ದರು.