ಹಾಸನ: ಜನಸಾಮಾನ್ಯರಿಗೆ ಮತ್ತು ಅಶಕ್ತರಿಗೆ ಆಯುಷ್ಮಾನ್ ಯೋಜನೆ ವರದಾನವಾಗಿದೆ ಎಂದು ಹಾಸನ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ಆರ್.ಹಾಲೇಶ್ ತಿಳಿಸಿದರು.
ನಗರದ ಹೊಸ ಲೈನ್ ರಸ್ತೆಯಲ್ಲಿರುವ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾ ದೇವಾಂಗ ನೌಕರರ ಸಂಘವು ಜಿಲ್ಲೆಯ ವಿವಿಧ ದೇವಾಂಗ ಸಂಘ ಸಂಸ್ಥೆಗಳ ನೆರವಿನೊಂದಿಗೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಸಹಕಾರದೊಂದಿಗೆ ಆಯೋಜಿಸಿದ್ದ ಆಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 176 ಕಾಯಿಲೆಗಳಿಗೆ ಆಯುಷ್ಮಾನ್ ಕಾರ್ಡ್ ಯೋಜನೆಯ ಮೂಲಕ ನಗದುರಹಿತ ಉಚಿತ ಚಿಕಿತ್ಸೆಯನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ ಎಂದು ವಿವರಿಸಿದರು.
ಹೊಳೆನರಸೀಪುರ ತಾಲೂಕು ವೈದ್ಯಾಧಿಕಾರಿ ಡಾ.ರಾಜೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದ ಆಯುಷ್ಮಾನ್ ಯೋಜನೆ ಮೂಲಕ ಪ್ರತಿವರ್ಷ ಬಿಪಿಎಲ್ ಕಾರ್ಡ್ ಹೊಂದಿರುವವರು 5 ಲಕ್ಷದವರೆಗೆ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರ ಕುಟುಂಬಕ್ಕೆ ವಾರ್ಷಿಕ ಮಿತಿ ಒಂದುವರೆ ಲಕ್ಷದವರೆಗೆ ಉಚಿತ ಆರೋಗ್ಯ ಚಿಕಿತ್ಸೆ ಲಭ್ಯವಿರುತ್ತದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ನಿರ್ದೇಶಕ ಮಮತಾ ರಾವ್ ಮಾತನಾಡಿ, ಜನಸಾಮಾನ್ಯರಿಗೆ ಆಯುಷ್ಮಾನ್ ಕಾರ್ಡ್ ಮಹತ್ವವನ್ನು ತಿಳಿಸುವ ಹಾಗೂ ನೋಂದಾಯಿಸುವ ಈ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗವಾಗಿ ಕೇಂದ್ರ ಸರ್ಕಾರದ ಅನೇಕ ಯೋಜನೆ ಮತ್ತು ಕಾರ್ಯಕ್ರಮಗಳನ್ನು ನೇರವಾಗಿ ಅತ್ಯಂತ ಪಾರದರ್ಶಕ ವ್ಯವಸ್ಥೆಯಲ್ಲಿ ಜಿಲ್ಲೆಯಲ್ಲಿ 225 ಕಾಮನ್ ಸರ್ವಿಸ್ ಸೆಂಟರ್‌ಗಳನ್ನು ಸ್ಥಾಪಿಸುವ ಮೂಲಕ ಸೇವೆ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬಿ. ಸೋಮಶೇಖರ್, ಕಾರ್ಯದರ್ಶಿ ಜಿ.ಬಿ. ಶಿವಣ್ಣ ,ದೇವಾಂಗ ಸಂಘದ ಗೌರವಾಧ್ಯಕ್ಷ ಜಿ.ಎಸ್. ಸತೀಶ್, ಬನಶಂಕರಿ ಕಲ್ಯಾಣ ಮಂಟಪದ ಅಧ್ಯಕ್ಷ ಆನಂದ್, ಡಾ. ಸುಹಾಸ್, ನೇತ್ರ ತಜ್ಞ ಡಾ. ಕುಮಾರ್, ವಕೀಲ ಹರೀಶ್, ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಖಜಾಂಚಿ ಕುಮಾರ್, ಜಾವಗಲ್ ಕೃಷ್ಣಮೂರ್ತಿ, ಪರಮೇಶ್, ತ್ಯಾಗರಾಜ್ ,ಶ್ರೀನಿವಾಸ ಶೆಟ್ಟಿ, ವಸಂತ್ ,ಶ್ರೀಮತಿ ಪುಷ್ಪ ,ಕವಿತಾ ಹಾಗೂ ದೇವಾಂಗ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಹಾಜರಿದ್ದರು ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಮುಂದೆ ಆಯುಷ್ಮಾನ್ ಕಾರ್ಡ್ ನೋಂದಣಿ ಮಾಡಿಸಲಾಯಿತು.