ಆನಂದ ಅಂಗಡಿ ಹುಬ್ಬಳ್ಳಿ
ಭಿಕ್ಷೆ ಬೇಡಬೇಕೆಂದರೆ ಕರೊನಾ ಸೋಂಕಿನ ಭೀತಿಯಿಂದ ಊರೊಳಗೆ ಬಿಟ್ಟುಕೊಳ್ಳುತ್ತಿಲ್ಲ. ಅಂಗಡಿಯಿಂದ ದಿನಸಿ ಸಾಮಗ್ರಿ ಖರೀದಿಸಬೇಕೆಂದರೆ ಜೇಬು ಖಾಲಿ. ಇದ್ಯಾವುದರ ಪರಿವೇ ಇಲ್ಲದ ಮಕ್ಕಳು ಹೊತ್ತೊತ್ತಿಗೆ ಹೇಳುವುದು ‘ಅವ್ವಾ ಹಸಿವು ತಾಳಲಾರೆ...’ ಎಂದು...
ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದ ಹೊರವಲಯದಲ್ಲಿ ಬೀಡು ಬಿಟ್ಟಿರುವ ಮಕ್ಕಳು ಸೇರಿ 30 ಜನರ ಆರ್ತನಾದವಿದು.
ಲಾಕ್ಡೌನ್ನಿಂದಾಗಿ ತಮ್ಮೂರಿಗೆ ಮರಳಲು ಆಗದೇ ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಇವರದ್ದು ಯಾರಾದರೂ ಊಟ, ಆಹಾರ ಸಾಮಗ್ರಿ ತಂದುಕೊಡುತ್ತಾರೇನೊ ಎಂದು ಕಾಯುವ ದುಸ್ಥಿತಿ. ಮಹಾರಾಷ್ಟ್ರದ ಪಂಢರಾಪುರ ಸಮೀಪದ ಹುನ್ನೂರು, ಗಣೇಶವಾಡದ ಸಂಬಂಧಿಕ ರೆಲ್ಲ ಸೇರಿ ಕಳೆದ ದೀಪಾವಳಿ ದಿನದಂದು ಪಂಢರಾಪುರದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಬೆಳೆಸಿದ್ದರು. ಮಕ್ಕಳು, ಮಹಿಳೆಯರು, ವೃದ್ಧರು, ಯುವಕರು ಸೇರಿ ಒಟ್ಟು 30 ಜನರ ತಂಡ ಇವರದ್ದು. 5 ಆಟೋಗಳಲ್ಲಿ ದೇವರ ಫೋಟೋಗಳನ್ನಿಟ್ಟಿದ್ದು, ಮಾರ್ಗದುದ್ದಕ್ಕೂ ಭಿಕ್ಷೆ ಬೇಡುತ್ತ ಹೋಗುತ್ತಾರೆ. ಬರುವ ಭಿಕ್ಷೆಯಲ್ಲಿಯೇ ದಿನದ ಊಟ, ಆಟೊಗಳಿಗೆ ಇಂಧನಕ್ಕೆ ಹಣ ವ್ಯಯಿಸಬೇಕಾಗುತ್ತದೆ. ಪ್ರತಿ ವರ್ಷ ಪಂಢರಾಪುರದಿಂದ ಧರ್ಮಸ್ಥಳಕ್ಕೆ ಹೋಗಿ ಬರುವುದಕ್ಕಾಗಿ ಇವರಿಗೆ ಬೇಕಾದ ಅವಧಿ 4 ತಿಂಗಳು. ಲೆಕ್ಕಾಚಾರದ ಪ್ರಕಾರ ಶಿವರಾತ್ರಿ ನಂತರ ಇವರು ಮರಳಿ ಪಂಢರಾಪುರ ತಲುಪಬೇಕಿತ್ತು.
ಈ ಬಾರಿ ಸ್ವಲ್ಪ ಜಾಸ್ತಿ ಸಮಯ ಹಿಡಿಯಿತು. ಪಂಢರಾಪುರದಿಂದ ಧರ್ಮ ಸ್ಥಳಕ್ಕೆ ಹೋಗಿ ಬಂದ ನಂತರದ ಅವಧಿಯಲ್ಲಿ ತಮ್ಮದೆ ಹೊಲದಲ್ಲಿ ಕೆಲಸ ಮಾಡಿ, ಹೊಟ್ಟೆ ತುಂಬಿಸಿಕೊಳ್ಳುವ ಜನ ಇವರು. ಮಾ. 23ಕ್ಕೆ ಬುಡರಸಿಂಗಿಗೆ ಬಂದ ಈ ತಂಡ, ಒಂದು ದಿನ ವಿಶ್ರಾಂತಿ ಪಡೆದು ಮುಂದೆ ಸಾಗಲು ನಿರ್ಧರಿಸಿತ್ತು. ಆದರೆ ಅಷ್ಟರಲ್ಲಾಗಲೇ ದೇಶದಾದ್ಯಂತ ಲಾಕ್ಡೌನ್ ಘೋಷಣೆಯಾಯಿತು.
ಲಾಕ್ಡೌನ್ ತೆರವುಗೊಳ್ಳುವವರೆಗೂ ಇರುವ ಸ್ಥಳದಲ್ಲಿಯೇ ಇರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಮಾತನ್ನು ರೇಡಿಯೋದಲ್ಲಿ ಕೇಳಿದ ಇವರು, ಅಂದಿನಿಂದ ಗ್ರಾಮದ ಹೊರಗೆ ಬಿಡಾರ ಹೂಡಿದ್ದಾರೆ. ಲಾಕ್ಡೌನ್ ಇನ್ನೂ ಮುಂದುವರಿದಲ್ಲಿ ಮಕ್ಕಳು ಸೇರಿದಂತೆ ತಮ್ಮವರೆಲ್ಲ ಹಸಿವಿನಿಂದ ಬಚಾವಾಗುವುದು ಹೇಗೆಂಬ ಚಿಂತೆಯೂ ಕಾಡುತ್ತಿದೆ.
ನಿನ್ನೆ ಒಂದಿಷ್ಟ ಜನಾ ಬಂದ ಅಕ್ಕಿ, ರವಾ, ಒಂದಿಷ್ಟ ಕಾಯಿಪಲ್ಲೆ ಕೊಟ್ಟ ಹೋಗ್ಯಾರ್ರಿ. ಯಾರಾದರ ಬಂದ ಏನರ ಕೊಡತಾರಂತ ಕಾಯಾಕತ್ತೇವ್ರಿ. | ಸುಭಾಸ ಗೌಡೆವಾರಿ ಪಾದಯಾತ್ರಿ
ಕಂಬಾರಗಣವಿ ಮಸೀದಿಯಲ್ಲಿ 12 ಜನ: ಅಳ್ನಾವರ ತಾಲೂಕಿನಲ್ಲಿ ಜಮಾತ್ಗೆ ಬಂದ ಗುಜರಾತ್ ಮೂಲದ 12 ಜನರನ್ನು ಶನಿವಾರ ಮಧ್ಯಾಹ್ನ ವಶಕ್ಕೆ ಪಡೆದು ಆರೋಗ್ಯ ತಪಾಸಣೆಗಾಗಿ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ಇವರು ವಾರದಿಂದ ತಾಲೂಕಿನ ಕಂಬಾರಗಣವಿಯ ಮಸೀದಿಯಲ್ಲಿ ವಾಸವಿದ್ದರು. ಗ್ರಾಮಕ್ಕೆ ಆಗಮಿಸಿದ ತಹಸೀಲ್ದಾರ್ ಅಮರೇಶ ಪಮ್ಮಾರ, ಪಿಎಸ್ಐ ಎಸ್.ಆರ್. ಕಣವಿ ವಿಚಾರಿಸಿದಾಗ ಅವರು ಜನವರಿಯಿಂದ ಗುಜರಾತ್ ಸೇರಿದಂತೆ ವಿವಿಧೆಡೆ ಜಮಾತ್ ನಡೆಸಿದ್ದಾಗಿ ತಿಳಿಸಿದ್ದಾರೆ.