ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ರಾಜಕಾರಣಿ ಎಸ್.ಆರ್.ಪಾಟೀಲ, ಸಿತಾರ ವಾದಕ ಛೋಟೆ ರಹಮತ ಖಾನ್ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಾಗೂ ಸಾಧನೆ ಮಾಡಿದ 12 ಜನರನ್ನು 2024ರ ಅವ್ವ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅವ್ವ ಸೇವಾ ಟ್ರಸ್ಟ್ ಅಧ್ಯಕ್ಷ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ತಾಯಿ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ಅವ್ವ ಸೇವಾ ಟ್ರಸ್ಟ್ ರಚಿಸಿ ಪುರಸ್ಕಾರ ನೀಡಲಾಗುತ್ತಿದೆ. ಈ ವರ್ಷ ಅವರ 14ನೇ ಪುಣ್ಯಸ್ಮರಣೆ ನಿಮಿತ್ತ ಹುಬ್ಬಳ್ಳಿ ಗುಜರಾತ್ ಭವನದಲ್ಲಿ ಡಿ. 15ರಂದು ಬೆಳಗ್ಗೆ 10.30ಕ್ಕೆ ಅವ್ವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪತ್ರಕರ್ತ ಚಂದ್ರಕಾಂತ ವಡ್ಡು, ಸಾಹಿತಿ ಡಾ. ಸಂಗಮನಾಥ ಲೋಕಾಪುರ, ಗಾಯಕಿ ರೇಖಾ ಹೆಗಡೆ, ಯಕ್ಷಗಾನ ಭಾಗವತ ಕೇಶವ ಕೊಳಗಿ, ಉದ್ಯಮಿ ಮಹೇಂದ್ರ ಸಿಂಘಿ, ಬಸವ ತತ್ವ ಪ್ರಚಾರಕ ಎಸ್. ಮಹದೇವಯ್ಯ, ಸಮಾಜ ಸೇವಕಿ ರಾಜೇಶ್ವರಿ ಪಾಟೀಲ, ಜಾನಪದ ಕಲಾವಿದ ಬಸವರಾಜ ಶಿಗ್ಗಾಂವಿ, ಸ್ಕೇಟ್ ಕ್ರೀಡಾಪಟು ತ್ರಿಶಾ ಜಡಲಾ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆ ಯಲ್ಲಿ 625 ಕ್ಕೆ 625 ಅಂಕಗಳಿಸಿದ ಅಂಕಿತಾ ಕೊಣ್ಣೂರ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25ಸಾವಿರ ರೂ. ನಗದು, ಪ್ರಶಸ್ತಿ ಫಲಕ, ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಹೇಳಿದರು.
ಇಳಕಲ್ಲಿ ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನಮಠದ ಶ್ರೀ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಉದ್ಘಾಟಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವ್ವ ಪ್ರಶಸ್ತಿ ಪ್ರದಾನ ಮಾಡುವರು. ಉಪನ್ಯಾಸಕ ಅಕ್ಷಯ ಗೋಖಲೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.