ಬೀದರ್: ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಮತ್ತು ಜಾನಪದ ಕಲಾವಿದರ ಬಳಗದಿಂದ ಗುರುವಾರ ಇಲ್ಲಿನ ಪಟ್ಟದ್ದೇವರ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ, ಕಥೆಗಾರ್ತಿ ಬಿ.ಜೆ. ಪಾರ್ವತಿ ಸೋನಾರೆ ಬರೆದಿರುವ `ಅವ್ವ ನೀ ಸಾಯಬಾರದಿತ್ತು' ಕಥಾ ಸಂಕಲನ ಲೋಕಾರ್ಪಣೆ ಮಾಡಲಾಯಿತು.
ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಕೃತಿ ಕುರಿತು ಮಾತನಾಡಿ, ಓದುಗರನ್ನು ಗಟ್ಟಿಯಾಗಿ ಹಿಡಿದಿಕೊಂಡು ಓದುವಂತೆ ಮಾಡುವ ಶಕ್ತಿ ಈ ಪುಸ್ತಕಕ್ಕಿದೆ. ಇಲ್ಲಿ ಶಬ್ಧಮಣಿಗಳನ್ನು ಪೋಣಿಸಿಕೊಂಡು ಬಂದಿದ್ದಾರೆ. ಮಹಿಳೆಯರ ನೋವು-ನಲಿವು, ತಲ್ಲಣದ ಮೇಲೆ ಹೆಚ್ಚೆಚ್ಚು ಫೋಕಸ್ ಮಾಡಿದ್ದಾರೆ. ಓದುಗರನ್ನು ಕಥೆಗಳತ್ತ ಸೆಳೆಯುವ ಕಲೆಗಾರಿಕೆ ಪಾರ್ವತಿ ಅವರು ತಮ್ಮ ಕಥೆಗಳಲ್ಲಿ ತೋರಿಸಿಕೊಟ್ಟಿದ್ದಾರೆ ಎಂದರು.
ಲೇಖಕಿ ಪಾರ್ವತಿ ಸೋನಾರೆ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನನಗೆ ನಿತ್ಯ ಹೊಸ ಹೊಸ ಜನರ ಹಾಗೂ ಅವರ ಬದುಕಿನ ಸಂಕಷ್ಟಗಳು ನನಗೆ ಕಥೆ ಬರೆಯಲು ಪ್ರೇರಣೆ ನೀಡಿದೆ ಎಂದು ಹೇಳಿದರು.
ಸಾನ್ನಿಧ್ಯ ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು, ಅಧ್ಯಕ್ಷತೆ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ವಹಿಸಿದ್ದರು. ಶಾಹೀನ್ ಸಂಸ್ಥೆ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ಜಾನಪದ ಪರಿಷತ್ ಯಾದಗಿರಿ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿದರು. ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ರವೀಂದ್ರ ಶಿರಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಹಿರಿಯ ಸಾಹಿತಿ ಜಯದೇವಿ ದುಬುಲಗುಂಡೆ, ಹಿರಿಯ ಆರೋಗ್ಯ ಸಹಾಯಕಿ ಲಕ್ಷ್ಮೀ ಇತರರಿದ್ದರು.
ನೀಟ್ ಪರೀಕ್ಷೆಯಲ್ಲಿ 9ನೇ ರ್ಯಾಂಕ್ ಪಡೆದ ಕಾರ್ತಿಕ ರೆಡ್ಡಿ, 85ನೇ ರ್ಯಾಂಕ್ ಪಡೆದ ಅರ್ಬಾಜ್ ಅಹ್ಮದ್, ಕರೊನಾ ವಾರಿಯರ್ ಡಾ.ರಷೀದ್, ರೀಟಾ ಮಠಪತಿ, ಪ್ರೇಮಲತಾ, ಸುಕೀರ್ತಾ, ಝರೆಮ್ಮಾ, ಶಕುಂತಲಾ, ಪ್ರಮೋದ, ಶಿವಲೀಲಾ, ಸ್ನೇಹಲತಾ, ಧೂಳಪ್ಪ, ಅನೀಲ, ರೆಹಮಾನ್, ವಿಲ್ಸನ್, ರಿಯಾಜ್, ನಾಗೇಶ ಡಪಲಾಪೂರೆ ಅವರನ್ನು ಸನ್ಮಾನಿಸಲಾಯಿತು. ವಿಜಯಕುಮಾರ ಸೋನಾರೆ ಸ್ವಾಗತಿಸಿದರು. ದೇವಿದಾಸ ಜೋಶಿ ನಿರೂಪಣೆ ಮಾಡಿದರು. ಓಂಕಾರ ಪಾಟೀಲ್ ವಂದಿಸಿದರು.