ಔರಾದ್: ಕಾಲೇಜು ಅಭಿವೃದ್ಧಿಗೆ ಯೋಜನೆಯನ್ನು ಹಾಕಿಕೊಂಡು ಹಂತ ಹಂತವಾಗಿ ಅನುಷ್ಠಾನಗೊಳಿಸಬೇಕು. ಅಭಿವೃದ್ಧಿಗೆ ನನ್ನ ಸಹಕಾರ ಸದಾ ಇರುತ್ತದೆ. ಆದರೆ ಅಭಿವೃದ್ಧಿ ಕೆಲಸದಲ್ಲಿ ಅವ್ಯವಹಾರ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಪ್ರಾಚಾರ್ಯರ ವಿರುದ್ಧ ಹಲವು ಆರೋಪಗಳಿವೆ. ಹೊಸದಾಗಿ ಬಂದಿರುವ ಪ್ರಾಂಶುಪಾಲರು ಸರಿಯಾಗಿ ಕೆಲಸ ಮಾಡಬೇಕು. ಜವಾಬ್ದಾರಿ ಅರಿತು ಕಾಲೇಜು ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವಂತೆ ಕೆಲಸ ಮಾಡಬೇಕು ಎಂದರು.
ಹಿಂದೆ ಕೆಲಸ ಮಾಡಿದ್ದ ಪ್ರಾಂಶುಪಾಲರ ನಿಷ್ಕಾಳಜಿಯಿಂದಾಗಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿದ್ದಾರೆ. ಮಕ್ಕಳಿಂದ ಪರೀಕ್ಷಾ ಶುಲ್ಕ ಪಡೆದು ವಿಶ್ವವಿದ್ಯಾಲಯಕ್ಕೆ ಭರಿಸದ ಕಾರಣ ಸಕಾಲಕ್ಕೆ ಅಂಕಪಟ್ಟಿಗಳು ಸಿಗಲಿಲ್ಲ. ಇದರಿಂದ ಮುಂದಿನ ವ್ಯಾಸಂಗ ಮಾಡಲು ಆಗದೆ ಉದ್ಯೋಗ ಪಡೆಯಲು ಸಾಧ್ಯವಾಗದೆ ಹಲವರು ಅತಂತ್ರರಾಗಿದ್ದರು. ವಿಷಯ ಅರಿತು ಸಂಬಂಧಿತ ಸಚಿವರು, ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ವಿದ್ಯಾರ್ಥಿವೇತನ ಹಣ ದುರ್ಬಳಕೆ ಸೇರಿ ೨೧ ಗುರುತರ ಆರೋಪಗಳು ಹಿಂದಿನ ಪ್ರಾಂಶುಪಾಲರ ಮೇಲಿವೆ ಎಂದು ಹೇಳಿದರು.
ಸ್ಥಳದಲ್ಲೇ ಪರಿಹಾರ: ಕಾಲೇಜು ಆವರಣದಲ್ಲಿ ಹೊಸ ಕಟ್ಟಡಗಳ ನಿರ್ಮಾಣವಾಗುತ್ತಿದೆ. ಒಂದೇ ಕೊಳವೆ ಬಾವಿಯಿದ್ದು, ಕಟ್ಟಡಗಳ ನಿರ್ಮಾಣ ಮತ್ತು ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿದೆ ಎಂದು ಪ್ರಾಂಶುಪಾಲರು ಶಾಸಕರ ಗಮನಕ್ಕೆ ತಂದಾಗ ಕೂಡಲೇ ಹೊಸ ಕೊಳವೆಬಾವಿ ಕಲ್ಪಿಸಿಕೊಡುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಚವ್ಹಾಣ್ ನಿರ್ದೇಶನ ನೀಡಿದರು.
ಕಾಲೇಜಿನ ವಿವಿಧ ವಿಭಾಗಗಳಲ್ಲಿ ೮೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪಟ್ಟಣ ಬಿಟ್ಟು ಕಾಲೇಜು ದೂರ ಇದ್ದು, ಮಕ್ಕಳು ನಡೆದುಕೊಂಡು ಹೋಗುತ್ತಿದ್ದಾರೆ ಎಂದು ಸಭೆಯಲ್ಲಿ ಶಾಸಕರ ಗಮನಕ್ಕೆ ತಂದಾಗ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಯನ್ನು ಕರೆಸಿ ಎರಡು ದಿನದೊಳಗಾಗಿ ಸಿಟಿ ಬಸ್ ಓಡಿಸಲು ವ್ಯವಸ್ಥೆ ಮಾಡಿಕೊಡುವಂತೆ ತಾಕೀತು ಮಾಡಿದರು.
ಪ್ರಾಚಾರ್ಯೆ ಅಂಬಿಕಾ ಕೊತಮೀರ್, ಪ್ರಮುಖರಾದ ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಕೇರಬಾ ಪವಾರ್, ಬಾಲಾಜಿ ಠಾಕೂರ್, ಸುಜೀತ್ ರಾಠೋಡ್, ಬಸವರಾಜ ಹಳ್ಳೆ ಇತರರಿದ್ದರು.
ಹೊಸ ಕಟ್ಟಡಕ್ಕೆ ಭೂಮಿಪೂಜೆ: ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ ೩.೮೮ ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಹೆಚ್ಚುವರಿ ಕೋಣೆಗಳ ನಿರ್ಮಾಣ ಕಾಮಗಾರಿಗೆ ಶಾಸಕ ಪ್ರಭು ಚವ್ಹಾಣ್ ಭೂಮಿಪೂಜೆ ನೆರವೇರಿಸಿದರು. ಕಟ್ಟಡ ಗುಣಮಟ್ಟದಿಂದ ನಿರ್ಮಿಸಬೇಕು. ಸರಿಯಾಗಿ ಕ್ಯೂರಿಂಗ್ ಮಾಡಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದು, ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು. ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಬೇಕೆಂಬ ಉದ್ದೇಶದಿಂದ ನಿರಂತರ ದುಡಿಯುತ್ತಿರುವೆ. ಶಾಲಾ-ಕಾಲೇಜು, ವಸತಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ.
| ಪ್ರಭು ಚವ್ಹಾಣ್
ಶಾಸಕ