ಬೈಲಹೊಂಗಲ: ಪಟ್ಟಣ ಹೆಸರಿಗೆ ಮಾತ್ರ ಉಪವಿಭಾಗ ಕೇಂದ್ರವಾಗಿದ್ದು, ಇಲ್ಲಿ ಏನೂ ಸರಿ ಇಲ್ಲ ಎಂಬುದನ್ನು ಕಾಣಲು ಇಲ್ಲಿನ ಬಸ್ ನಿಲ್ದಾಣ ಕಂಡರೆ ಸಾಕು. ಪಟ್ಟಣದ ಒಳ ರಸ್ತೆಗಳು ಹದಗೆಟ್ಟಿದ್ದು ಒಂದೆಡೆಯಾದರೆ, ಬಸ್ ನಿಲ್ದಾಣ ಅವ್ಯಸ್ಥೆಯಂತೂ ಹೇಳ ತೀರದಾಗಿದೆ.
ಬೈಲಹೊಂಗಲ ಬಸ್ ನಿಲ್ದಾಣ ವಿಶಾಲವಾದ ಪ್ರದೇಶ ಹೊಂದಿದೆ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಸದ್ಯ ನಿಲ್ದಾಣದಲ್ಲಿ ಬಸ್ ಏರಲು ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಬಂದೊದಗಿದೆ. ತಗ್ಗು-ಗುಂಡಿಗಳು ಬಸ್ ನಿಲ್ದಾಣ ಪ್ರವೇಶಿಸುವ ಪ್ರಯಾಣಿಕರನ್ನು ಸ್ವಾಗತಿಸುತ್ತಿವೆ. ಬಸ್ ಹತ್ತಲು ಜನರು ಹರ ಸಾಹಸ ಪಡಬೇಕಾಗಿದೆ. ಮಹಿಳೆಯರು, ಮಕ್ಕಳು, ವಯೋವೃದ್ಧರು ಬಸ್ ನಿಲ್ದಾಣದ ಒಳ ರಸ್ತೆ ಅವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ವರ್ಷಗಳಿಂದ ಸಮಸ್ಯೆ: ಇಲ್ಲಿನ ಸಮಸ್ಯೆ ಇಂದು ನಿನ್ನೆಯದಲ್ಲ ಅನೇಕ ವರ್ಷಗಳಿಂದ ಈ ದುಸ್ಥಿತಿ ಇದೆ. ಕಳೆದ ಎರಡು ವರ್ಷಗಳಿಂದ 5 ಕೋಟಿ ರೂಪಾಯಿ ವೆಚ್ಚಲ್ಲಿ ನೂತನ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ನಡೆದಿದೆ. 4 ಕೋಟಿ ರೂ.ವೆಚ್ಚದಲ್ಲಿ ಒಳಾಂಗಣದ ಸಿಸಿ ರಸ್ತೆ ನಡೆಯಲಿದೆ. ಆದರೆ, ಈ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು ಸಮಸ್ಯೆಗೆ ಕಾರಣವಾಗಿದೆ. ಬಸ್ ಕಾಮಗಾರಿ ನಡೆದಿದೆ ಎಂದು ನೆಪ ಹೇಳುವ ಬದಲು ಈ ನಿಲ್ದಾಣ ನಿರ್ವಹಣೆ ಹೊತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಬೈಲಹೊಂಗಲ ಬಸ್ ನಿಲ್ದಾಣದ ಒಳ ರಸ್ತೆಗಳು ಎಸಿ ಕಾರುಗಳಲ್ಲಿ ಸಂಚರಿಸುವ ಜನಪ್ರತಿನಿಧಿಗಳ ಕಣ್ಣಿಗೆ ಕಾಣದಾಗಿದೆ. ಜನ ಸಾಮಾನ್ಯರ ಸಮಸ್ಯೆಗೆ ಕೂಡಲೆ ಸ್ಪಂದಿಸಿ ಬಸ್ ನಿಲ್ದಾಣದ ರಸ್ತೆ ದುರಸ್ತಿ ಮಾಡಬೇಕು. ಇಲ್ಲದಿದ್ದರೆ ಸಾರ್ವಜನಿಕರ ಜತೆ ಸೇರಿ ತೀವ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ.| ಶಿವಾನಂದ ಬೆಟಗೇರಿ ಪುರಸಭೆ ಮಾಜಿ ಸದಸ್ಯಕೇಂದ್ರ ಬಸ್ ನಿಲ್ದಾಣದ ಅಧಿಕಾರಿಗಳಿಗೆ ಮಳೆಗಾಲಕ್ಕೂ ಮುನ್ನವೇ ಪತ್ರ ಬರೆದು ಒಳಾಂಗಣ ರಸ್ತೆಯ ದುಸ್ಥಿತಿ ವಿವರಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇನ್ನೊಮ್ಮೆ ಪತ್ರ ಬರೆದು ಗಮನ ಸೆಳೆಯಲಾಗುವುದು.| ಚೇತನ ಸಾಣಿಕೊಪ್ಪ ಸಾರಿಗೆ ವ್ಯವಸ್ಥಾಪಕ, ಬೈಲಹೊಂಗಲ
| ಬಸವರಾಜ ಕಲಾದಗಿ ಬೈಲಹೊಂಗಲ