ಜಿಲ್ಲೆ

ಅವ್ಯವಸ್ಥೆಯ ಆಗರ ಬಾಗೇಪಲ್ಲಿ ಎಪಿಎಂಸಿ

Chikkaballapur

ಬಾಗೇಪಲ್ಲಿ : ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿ ಹಾಗೂ ಚುನಾಯಿತ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಮಾರುಕಟ್ಟೆಗೆ ಬರುವ ರೈತರು ಮತ್ತು ಹಮಾಲಿಗಳು ವಿಶ್ರಾಂತಿ ಗೃಹ, ಶುದ್ಧ ನೀರು ಹಾಗೂ ಶೌಚಗೃಹ ಸೌಲಭ್ಯಗಳಿಲ್ಲದೆ ನಿತ್ಯ ನರಕ ಅನುಭವಿಸುವಂತಾಗಿದೆ.

ತೋಟಗಾರಿಕೆ ಬೆಳೆಗೆ ಪ್ರಸಿದ್ಧಿಯಾಗಿರುವ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳಿಗೆ ಇಲ್ಲಿನ ಮಾರುಕಟ್ಟೆಯೇ ಕೇಂದ್ರವಾಗಿದ್ದು, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿ ರಾಜ್ಯದ ವಿವಿಧ ಭಾಗಗಳ ವ್ಯಾಪಾರಸ್ಥರು ಬರುತ್ತಾರೆ.ಸುಮಾರು 8 ಎಕರೆಯಲ್ಲಿ ಸರ್ಕಾರ ಕೋಟ್ಯಂತರ ರೂ. ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಿಸಿದ್ದು, ವಿಶಾಲವಾದ ಗೋದಾಮು, ಟ್ರೇಡರ್ಸ್‌ಗೆ ಮಳಿಗೆ, ರೈತರ ವಿಶ್ರಾಂತಿಗಾಗಿ ರೈತ ಭವನ, ನೀರಿನ ಘಟಕ, ಶೌಚಗೃಹ ಸೇರಿ ಮೂಲ ಸೌಲಭ್ಯಗಳಿಗೆ ಅವಕಾಶ ಕಲ್ಪಿಸಿದೆ. ರೈತರು, ವ್ಯಾಪಾರಸ್ಥರು, ಹಮಾಲಿಗಳು ಮಾತ್ರ ಸೌಲಭ್ಯಗಳಿಲ್ಲದೆ ಪರಿತಪಿಸುವಂತಾಗಿದೆ.

ಶೌಚಗೃಹ ಮತ್ತು ನೀರಿನ ಘಟಕಕ್ಕೆ ಬೀಗ: ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಶೌಚಗೃಹ ಮತ್ತು ಶುದ್ಧ ನೀರಿನ ಘಟಕಕ್ಕೆ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿ ಇಲ್ಲದ ನೆಪ ಹೇಳಿಕೊಂಡು ಬೀಗ ಜಡಿದಿದ್ದು, ಕುಡಿಯುವ ನೀರಿಗೂ ಪರಿತಪಿಸಬೇಕಾಗಿದೆ, ಶೌಚಕ್ಕಾಗಿ ಕೆರೆ ಪ್ರದೇಶವನ್ನು ಆಶ್ರಯಿಸುವಂತಾಗಿದೆ.ಮಾರುಕಟ್ಟೆಯಲ್ಲಿ ಸ್ವಚ್ಛತೆ ಮರೀಚಿಕೆ ಆಗಿದೆ, ರೈತ ಭವನ ಉಳ್ಳವರ ಗೋದಾಮಾಗಿ ಬದಲಾಗಿದ್ದು, ರಾತ್ರಿ ವೇಳೆ ಉತ್ಪನ್ನವನ್ನು ಮಾರುಕಟ್ಟೆಗೆ ತರುವ ರೈತರು ಮೂಟೆಗಳ ಮೇಲೆಯೇ ವಿಶ್ರಾಂತಿ ಪಡೆಯಬೇಕಿದೆ.