ಭಾಲ್ಕಿ ತಾಲೂಕಿನ ತಳವಾಡ(ಕೆ) ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ನೇತೃತ್ವದ ತಂಡ ಭೇಟಿ ನೀಡಿ ಮೊಟ್ಟೆಗಳನ್ನು ಪರಿಶೀಲಿಸಿತು. ಶೇಖರಗೌಡ ಜಿ., ಡಾ.ತಿಪ್ಪೇಸ್ವಾಮಿ ಕೆ.ಟಿ ಇದ್ದರು. 
ಜಿಲ್ಲೆ

ಅವ್ಯವಸ್ಥೆ ವಿರುದ್ಧ ಅಸಮಾಧಾನ

ಭಾಲ್ಕಿ: ತಾಲೂಕಿನ ಸರ್ಕಾರಿ ಶಾಲೆ, ವಸತಿನಿಲಯ, ಅಂಗನವಾಡಿ, ಗ್ರಾಮ ಪಂಚಾಯಿತಿ ಸೇರಿ ವಿವಿಧೆಡೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಬುಧವಾರ ಭೇಟಿ ನೀಡಿ ಅವ್ಯವಸ್ಥೆ ವಿರುದ್ಧ ಅಸಮಾಧಾನ ಹೊರಹಾಕಿದರು.

ತಳವಾಡ(ಕೆ) ಗ್ರಾಮದ ಅಂಗನವಾಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋನಮೇಳಕುಂದಾ ಮುರಾರ್ಜಿ ವಸತಿ ಶಾಲೆ, ನಿಟ್ಟೂರ(ಬಿ) ಗ್ರಾಪಂಗೆ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ, ಶೇಖರಗೌಡ ಜಿ., ಡಾ.ತಿಪ್ಪೇಸ್ವಾಮಿ ಕೆ.ಟಿ ಒಳಗೊಂಡ ತಂಡ ಭೇಟಿ ನೀಡಿ ಮೊಟ್ಟೆ, ಆಹಾರಧಾನ್ಯ ಪೂರೈಕೆ ಸೇರಿ ಶಾಲಾ, ಮಕ್ಕಳ ಗ್ರಾಮ ಸಭೆ ನಡಾವಳಿ ದಾಖಲೆಗಳನ್ನು ಪರಿಶೀಲಿಸಿತು. ಅಂಗನವಾಡಿಗೆ ಭೇಟಿ ನೀಡಿದಾಗ ಕಾರ್ಯಕರ್ತೆ ಇಲ್ಲದಿರುವುದನ್ನು ಕಂಡು ಸದಸ್ಯರು ಗರಂ ಆದರು.

೨೩ ಮಕ್ಕಳ ದಾಖಲೆಯಲ್ಲಿ ಕೇವಲ ಇಬ್ಬರ ಹಾಜರಿ ಇದ್ದರೆ ಹೇಗೆ? ಉಳಿದ ಮಕ್ಕಳು ಎಲ್ಲಿದ್ದಾರೆ? ಆಹಾರಧಾನ್ಯ ಜತೆಗೆ ಸಣ್ಣ ಗಾತ್ರದ ಮೊಟ್ಟೆ ಕಂಡು ಅಚ್ಚರಿಗೊಂಡ ಸದಸ್ಯರು, ಒಂದು ಮಗುವಿಗೆ ಕನಿಷ್ಠ ೫೦ ಗ್ರಾಂ ಮೊಟ್ಟೆ ಕೊಡಬೇಕು. ಆದರೆ ಅದಕ್ಕಿಂತ ಸಣ್ಣ ಗಾತ್ರದ ಮೊಟ್ಟೆ ಪೂರೈಕೆ ಆಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ದಾಖಲೆಯನ್ನು ಸಮರ್ಪಕ ನಿರ್ವಹಿಸದ ಅಂಗನವಾಡಿ ಕಾರ್ಯಕರ್ತೆ ಮತ್ತು ಮೊಟ್ಟೆ ಪೂರೈಕೆದಾರರಿಗೆ ನೋಟಿಸ್ ನೀಡಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಸಿಡಿಪಿಒಗೆ ಸೂಚಿಸಿದರು.

ನಂತರ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ, ತರಗತಿ ಕೋಣೆಗಳಿಗೆ ಭೇಟಿ ನೀಡಿದರು. ಒಂದು ಕೋಣೆಯಲ್ಲಿ ೧ರಿಂದ ೫, ಮತ್ತೊಂದು ಕೋಣೆಯಲ್ಲಿ ೬, ೭ನೇ ತರಗತಿ ಮಕ್ಕಳಿಗೆ ಸಾಮೂಹಿಕವಾಗಿ ಕೂಡಿಸಿ ಪಾಠ ಬೋಧನೆ ಮಾಡುತ್ತಿರುವುದನ್ನು ಕಂಡು ದಂಗಾದರು. ಪ್ರತ್ಯೇಕ ತರಗತಿ ಕೋಣೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು. ನಂತರ ಅಡುಗೆ ಕೋಣೆಗೆ ಭೇಟಿ ನೀಡಿ ತೊಗರಿ ಬೇಳೆ ಪರಿಶೀಲಿಸಿ ಕಲಬೆರಕೆ ಬೇಳೆ ಪೂರೈಕೆ ಮಾಡುತ್ತಿರುವ ವಿತರಿಕರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದರು.

ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ. ಹಳ್ಳದ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಸತೀಶ್ ಸಂಗನ್, ಬಿಸಿಯೂಟ ಅಧಿಕಾರಿ ಮಲ್ಲಿನಾಥ ಸಜ್ಜನ್ ಇತರರಿದ್ದರು.

ಪ್ರಾಚಾರ್ಯ, ವಾರ್ಡನ್‌ಗೆ ತರಾಟೆ: ಕೋನಮೇಳಕುಂದಾ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯೋಗದ ಸದಸ್ಯರು ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ತರಗತಿ ಕೋಣೆಗೆ ತೆರಳಿ ಮಕ್ಕಳ ಸಮಸ್ಯೆ ಆಲಿಸಿದರು. ಕಳೆದ ವರ್ಷ ಸರಬರಾಜು ಆದ ಸಾಬೂನು, ಪೇಸ್ಟ್ ಒಳಗೊಂಡ ಕಿಟ್, ಶೂ, ಕಂಪಾಸ್ ಬಾಕ್ಸ್ ಮಕ್ಕಳಿಗೆ ನೀಡದಿರುವುದು, ದಾಖಲೆ ಪುಸ್ತಕದಲ್ಲಿ ಸಮರ್ಪಕ ಮಾಹಿತಿ ಇಲ್ಲದಿರುವುದನ್ನು ಗಮನಿಸಿದ ನಂತರ ಪ್ರಾಚಾರ್ಯರನ್ನು ವಿಚಾರಿಸಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಎಷ್ಟಿದೆ? ಎಸ್ಸೆಸ್ಸೆಲ್ಸಿ ಫಲಿತಾಂಶ ಎಷ್ಟು ಬಂದಿದೆ? ಕಳೆದ ವರ್ಷ ಪೂರೈಕೆಯಾದ ಕಿಟ್, ಶೂ ಮಕ್ಕಳಿಗೆ ಏಕೆ ವಿತರಿಸಿಲ್ಲ? ದೂರು ಪಟ್ಟಿಗೆಗೆ ಎಷ್ಟು ಪತ್ರಗಳು ಬಂದಿವೆ ಎಂದು ಪ್ರಶ್ನಿಸಿದರು. ಸಮರ್ಪಕ ಉತ್ತರ, ಸರಿಯಾಗಿ ದಾಖಲೆ ನೀಡದ ಪ್ರಾಚಾರ್ಯ ಮತ್ತು ವಾರ್ಡನ್ ಅವರನ್ನು ತರಾಟೆಗೆ ತೆಗೆದುಕೊಂಡು ಈ ಇಬ್ಬರಿಗೆ ನೋಟಿಸ್ ನೀಡಿ ವರದಿ ಸಲ್ಲಿಸುವಂತೆ ಸದಸ್ಯ ಶಶಿಧರ ಕೋಸಂಬೆ ಮೇಲಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಸೂಚಿಸಿದರು.

ನೀರಿನ ಸಮಸ್ಯೆ ನೀಗಿಸಿ: ನಿಟ್ಟೂರ(ಬಿ) ಗ್ರಾಮದ ಸಮಾಜ ಕಲ್ಯಾಣ ಇಲಾಖೆ ಬಾಲಕರ ವಸತಿನಿಲಯಕ್ಕೆ ಭೇಟಿ ನೀಡಿ ಕೊಠಡಿ, ಶೌಚಗೃಹ, ನೀರಿನ ವ್ಯವಸ್ಥೆ ಪರಿಶೀಲಿಸಿದ ತಂಡ, ನೀರಿನ ವ್ಯವಸ್ಥೆ ಇಲ್ಲದಿದ್ದರೆ ಮಕ್ಕಳು ಹೇಗೆ ವಸತಿ ಮಾಡಲು ಸಾಧ್ಯ? ಕೂಡಲೇ ವ್ಯವಸ್ಥೆ ಸುಧಾರಿಸಿ ನೀರಿನ ವ್ಯವಸ್ಥೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಎಡಿಗೆ ಸೂಚಿಸಿತು.

ನಿಟ್ಟೂರ ಗ್ರಾಪಂ ಪಿಡಿಒಗೆ ನೋಟಿಸ್: ನಿಟ್ಟೂರ(ಬಿ) ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಆಯೋಗದ ಸದಸ್ಯರು, ಮಕ್ಕಳಿಗೆ ಸಂಬಂಧಿತ ವಿವಿಧ ಮಾಹಿತಿ ಕೇಳಿದರು. ಯಾವುದನ್ನೂ ದಾಖಲೆ ಪುಸ್ತಕದಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಪಿಡಿಒಗೆ ನೋಟಿಸ್ ನೀಡಿ ಉತ್ತರಿಸುವಂತೆ ಸೂಚಿಸಿದರು.

ಈ ಭಾಗದ ಶೈಕ್ಷಣಿಕ ಪ್ರಗತಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವಿವಿಧ ಯೋಜನೆಗಳಡಿ ಸಾಕಷ್ಟು ಪಾಠೋಪಕರಣ, ಪೀಠೋಪಕರಣ ಒದಗಿಸುತ್ತಿದ್ದಾರೆ. ಆದರೆ ಸಮರ್ಪಕ ಬಳಕೆ ಆಗದಿರುವುದು ಬೇಸರ ತರಿಸಿದೆ. ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕಡ್ಡಾಯವಾಗಿ ಮೂರು ತಿಂಗಳಿಗೊಮ್ಮೆ ಟಾಸ್ಕ್ ರ್ಫೋಸ್​  ಸಭೆ ನಡೆಸಿ ಪರಿಣಾಮಕಾರಿ ಕ್ರಮ ಜರುಗಿಸಬೇಕು.

| ಶಶಿಧರ ಕೋಸಂಬೆ

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ

ಶಾಲೆಯ ಒಂದೇ ಕೋಣೆಯಲ್ಲಿ ೧ರಿಂದ ೫ನೆಯ ತರಗತಿ ಮಕ್ಕಳಿಗೆ ಪಾಠ ಮಾಡಿದರೆ ಶಿಕ್ಷಣ ವ್ಯವಸ್ಥೆ ಹೇಗೆ ಸುಧಾರಣೆ ಆಗಲು ಸಾಧ್ಯ? ಮೇಲಧಿಕಾರಿಗಳು ಗಮನಹರಿಸಿ ವ್ಯವಸ್ಥೆ ಸುಧಾರಿಸಬೇಕು.

| ಶೇಖರಗೌಡ ಜಿ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ