ಹಾಸನ:ಶಿರಾಡಿ ಘಾಟ್ ನಲ್ಲಿ ಚತುಷ್ಪತ ರಸ್ತೆ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುಡ್ಡಗಳನ್ನು 90 ಡಿಗ್ರಿ ಕೋನದಲ್ಲಿ ಅವೈಜ್ಞಾನಿಕವಾಗಿ ಕೊರೆದ ಕಾರಣ ಭೂ ಕುಸಿತ ಸಂಭವಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಕಲೇಶಪುರ ತಾಲೂಕಿನಲ್ಲಿ ಭೂ ಕುಸಿತ ಸಂಭವಿಸಿರುವ ದೊಡ್ಡತಪ್ಪಲೆ ಹಾಗೂ ಹಾರ್ಲೆ ಗ್ರಾಮಗಳಿಗೆ ಶನಿವಾರ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಗುಡ್ಡವನ್ನು ಸ್ಲೋಪ್ (ಕಡಿದಾಗಿ) ಆಗಿ ಕೊರೆದಿದ್ದರೆ ಭೂ ಕುಸಿತ ಸಂಭವಿಸುತ್ತಿರಲಿಲ್ಲ ಎಂದರು.
ಇದು ರಾಷ್ಟ್ರೀಯ ಹೆದ್ದಾರಿ 75 ಮಂಗಳೂರು- ಬೆಂಗಳೂರು ಸಂಪರ್ಕಿಸುವ ನಿತ್ಯ ನೂರಾರು ಕೋಟಿ ವ್ಯವಹಾರ ನಡೆಯುವ ರಸ್ತೆಯಾಗಿದೆ. ಈಗಾಗಲೇ ಹೆದ್ದಾರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಒಮ್ಮೆ ಭೇಟಿಯಾಗಿ ಮನವರಿಕೆ ಮಾಡಿದ್ದೆ. ಇದೀಗ ಮತ್ತೊಮ್ಮೆ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆಯುತ್ತೇನೆ. ನಾನು ಒಮ್ಮೆ ದೆಹಲಿ ಗೆ ತೆರಳಿ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಸಂಬಂಧ ಚರ್ಚೆ ನಡೆಸುತ್ತೇನೆ ಎಂದರು.
ಕೇರಳದಲ್ಲಿ ನೂರು ಮನೆಗಳ ನಿರ್ಮಾಣ
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ನೂರಾರು ಕನ್ನಡಿಗರು ಕಣ್ಮರೆಯಾಗಿದ್ದಾರೆ. ನಾಪತ್ತೆಯಾಗಿರುವವರ ಹುಡುಕಾಟ ಮುಂದುವರಿದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಈಗಾಗಲೇ ನಾನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಕರೆ ಮಾಡಿ, ಕರ್ನಾಟಕ ಸರ್ಕಾರದಿಂದ ಕೇರಳದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಕೇರಳ ಭೂ ಕುಸಿತದಲ್ಲಿ ಮನೆ ಕಳೆದುಕೊಂಡಿರು ಕನ್ನಡಿಗರಿಗೆ 100 ಮನೆಗಳನ್ನು ಕಟ್ಟಿಕೊಡುವುದಾಗಿ ಹೇಳಿದ್ದೇನೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಸಂಸದ ಶ್ರೇಯಸ್ ಪಟೇಲ್, ಶಾಸಕ ಸಿಮೆಂಟ್ ಮಂಜು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ವಿ. ರಶ್ಮಿ, ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಉಪವಿಭಾಗಾಧಿಕಾರಿ ಶ್ರುತಿ, ಎನ್ ಎಚ್ ಎಐ ಯೋಜನಾ ನಿರ್ದೇಶಕ ಪ್ರವೀಣ್, ಐಜಿ ಬೋರಲಿಂಗಯ್ಯ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಇದ್ದರು.