ಜಿಲ್ಲೆ

ಅವೈಜ್ಞಾನಿಕ ರಸ್ತೆ ಕಾಮಗಾರಿ ಸ್ಥಗಿತಕ್ಕೆ ಗ್ರಾಮಸ್ಥರ ಆಗ್ರಹ

ಸೋಮವಾರಪೇಟೆ: ಮಾಗಡಿ-ಜಾಲ್ಸೂರು ರಾಜ್ಯ ಹೆದ್ದಾರಿ 85ರ ಸೋಮವಾರಪೇಟೆ, ಅಲೇಕಟ್ಟೆ, ತೋಳೂರುಶೆಟ್ಟಳ್ಳಿ, ಕೂತಿ ಗ್ರಾಮ ಸಂಪರ್ಕದ 20 ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿ ಯೋಜನಾ ಪಟ್ಟಿಯಂತೆ ನಡೆಯುತ್ತಿಲ್ಲ, ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಕೂತಿ, ತೋಳೂರುಶೆಟ್ಟಳ್ಳಿ ಗ್ರಾಮಸ್ಥರು ತೆರಳಿ ಇಂಜಿನಿಯರ್ ಮತ್ತು ಗುತ್ತಿಗೆದಾರರು ಸ್ಥಳಕ್ಕೆ ಬರುವ ತನಕ ಕಾಮಗಾರಿ ನಡೆಸದಂತೆ ಕೆಲಸಗಾರರಿಗೆ ಸೂಚಿಸಿದರು.

ಅಲೇಕಟ್ಟೆಯಿಂದ ಹರಪಳ್ಳಿ ಗ್ರಾಮದ ತನಕ 8 ಕಿ.ಮೀ.ರಸ್ತೆ ಕಾಮಗಾರಿಗೆ ಕಳೆದ ಜನವರಿ ತಿಂಗಳಲ್ಲೇ ಮ್ಯಾಪಿಂಗ್ ಮಾಡಲಾಗಿತ್ತು. ಕೇವಲ 3 ಕಿ.ಮೀ.ರಸ್ತೆ ಕಾಮಗಾರಿ ನಡೆಯುತ್ತಿದೆ. ಬೇಸಿಗೆ ಸಮಯದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳದೆ ಮಳೆಗಾಲದಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಬೆರಳೆಣಿಕೆಯ ಕಾರ್ಮಿಕರೊಂದಿಗೆ ಅವೈಜ್ಞಾನಿಕವಾಗಿ ಕೆಲಸ ಮಾಡಿಸಲಾಗುತ್ತಿದೆ. ಗುತ್ತಿಗೆದಾರ, ಇಂಜಿನಿಯರ್ ಆಗಲಿ ಕಾಮಗಾರಿ ಸ್ಥಳದಲ್ಲಿ ನಿಂತು ಕೆಲಸ ಮಾಡುತ್ತಿಲ್ಲ.

ಯೋಜನಾಪಟ್ಟಿಯಂತೆ ಯಾವುದೇ ಕೆಲಸ ನಡೆಯುತ್ತಿಲ್ಲ. ಉಪಯೋಗಿಸುತ್ತಿರುವ ವಸ್ತುಗಳು ಕೂಡ ಕಳಪೆ ಗುಣಮಟ್ಟದ್ದು ಎಂಬ ಸಂಶಯವಿದ್ದು, ಕೂಡಲೇ ಮೇಲಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಕಾನೂನು ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಮುಂದಿನ ಜೂ.16ರಂದು ಲೋಕೋಪಯೋಗಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೂತಿ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಜಯರಾಮ್, ರೈತಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಎಚ್ಚರಿಸಿದರು.

ಆರ್‌ಟಿಐ ಕಾರ್ಯಕರ್ತ ಬಗ್ಗನ ಅನಿಲ್, ಚೌಡ್ಲು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ.ಪರಮೇಶ್, ಪ್ರಮುಖರಾದ ಕೆ.ಟಿ.ಗಿರೀಶ್, ಯಾದವ್ ಕುಮಾರ್, ದಿವಾಕರ್, ಜಿತೇಂದ್ರ, ಭರತ್, ವಿನೋದ್ ಮತ್ತಿತರರಿದ್ದರು.