ಜಿಲ್ಲೆ

ಅವೈಜ್ಞಾನಿಕ ಯುಜಿಡಿ ಬದಲಾಗಬೇಕಿದೆ

ಚಿತ್ರದುರ್ಗ: ನಗರದ ಬಹುತೇಕ ಕಡೆ ಪಿಟ್‌ಗಳಿವೆ. ಅವೈಜ್ಞಾನಿಕ ಯುಜಿಡಿ ಕಾಮಗಾರಿಯಿಂದಾಗಿ ಸಂಪರ್ಕವೂ ಸರಿ ಇಲ್ಲ. ಹೀಗಾಗಿ ಚರಂಡಿಗಳ ಚೇಂಬರ್ ತುಂಬಿ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ ಎಂದು ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ದೂರಿದರು.

ಬೇಡರ ಕಣ್ಣಪ್ಪ ದೇಗುಲ ಪಕ್ಕದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುಜಿಡಿ ವ್ಯವಸ್ಥೆ ಬದಲಾಗದಿದ್ದರೆ, ತೊಂದರೆ ತಪ್ಪಿದ್ದಲ್ಲ. ಎಲ್ಲೆಡೆ ಕಾಂಕ್ರಿಟ್ ರಸ್ತೆ ನಿರ್ಮಿಸಿರುವ ಕಾರಣ ಮಣ್ಣಿನ ರಸ್ತೆಗಳೇ ಕಣ್ಣಿಗೆ ಕಾಣದಂತಾಗಿದೆ. ಹದಗೆಟ್ಟ ನಗರ ಸರಿಪಡಿಸಲು ಶಾಸಕರು ಮುಂದಾಗಬೇಕು ಎಂದು ಮನವಿ ಮಾಡಿದರು.

ಸಮುದಾಯ ಭವನದ ಮೇಲ್ಭಾಗದಲ್ಲಿ ಗ್ರಂಥಾಲಯ ಮಾಡುವುದರಿಂದ ಮಕ್ಕಳ ಓದಿಗೆ ಅನುಕೂಲವಾಗಲಿದೆ. ಇದಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಹತ್ತು ಮಂದಿ ಇರುವ ಸ್ತ್ರೀಶಕ್ತಿ ಸಂಘಕ್ಕೆ 2.5 ಲಕ್ಷ ರೂ. ನೆರವು, ನೇರ ಸಾಲಸೌಲಭ್ಯ ನೀಡುವ, ಜಮೀನು ಇದ್ದವರಿಗೆ ಕೊಳವೆಬಾವಿ ಕೊರೆಸಲು ಅವಕಾಶವಿದೆ. ಇದನ್ನು ಅರ್ಹರು ಸದ್ಬಳಕೆ ಮಾಡಿಕೊಳ್ಳಿ ಎಂದರು.

ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮಾತನಾಡಿ, ಸಿ.ಕೆ.ಪುರದ 48 ಫಲಾನುಭವಿಗಳು ಸ್ಲಂ ಬೋರ್ಡ್‌ನಿಂದ ದೊರೆಯುವ ಸೌಲಭ್ಯಕ್ಕೆ ಆಯ್ಕೆಯಾಗಿದ್ದಾರೆ. ದೇಗುಲ ನಿರ್ಮಾಣಕ್ಕಿಂತ ಗ್ರಂಥಾಲಯ ತೆರೆದರೆ ನೂರಾರು ಮಕ್ಕಳ ಜ್ಞಾನಾರ್ಜನೆಗೆ ಸಹಕಾರಿಯಾಗಲಿದೆ. ಆದ್ದರಿಂದ ಪುಸ್ತಕಗಳನ್ನು ದಾನವಾಗಿ ಕೊಡಲು ಮುಂದಾಗಿ ಎಂದು ಸಲಹೆ ನೀಡಿದರು.

ಜನಸೇವೆಗಾಗಿ ರಾಜಕೀಯ ಪ್ರವೇಶಿಸಿದ್ದು, ಇಲ್ಲೊಂದು ವ್ಯಾಯಾಮ ಶಾಲೆ ತೆರೆಯಬೇಕೆಂಬ ಬೇಡಿಕೆ ಇದೆ. ಅದನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್.ಅಂಜಿನಪ್ಪ, ನಗರಸಭೆ ಸದಸ್ಯ ವೆಂಕಟೇಶ್, ಮಾಜಿ ಸದಸ್ಯರಾದ ಪ್ರಕಾಶ್, ತಿಪ್ಪೇಸ್ವಾಮಿ, ಅಂಗಡಿ ಮಂಜುನಾಥ್, ಮುಖಂಡರಾದ ಕೆ.ಸಿ.ನಾಗರಾಜ್, ಆರ್.ಪ್ರಕಾಶ್, ಅಬ್ದುಲ್, ವಿಜಯಣ್ಣ, ಸುಧಾಕರ್, ವಕೀಲ ಬೀಸನಳ್ಳಿ ಜಯಣ್ಣ ಇತರರಿದ್ದರು.