ಜಿಲ್ಲೆ

ಅವೈಜ್ಞಾನಿಕ ಯುಜಿ ಕೇಬಲ್ ಅಳವಡಿಕೆಯಿಂದ ಅಪಾಯ: ಮೇಯರ್ ಶಿವಕುಮಾರ್ ಎಚ್ಚರಿಕೆ

ಮೈಸೂರು: ನಗರದಲ್ಲಿ ನೆಲದಲ್ಲಿ ಹೂಳುತ್ತಿರುವ 11 ಕೆ.ವಿ. ವಿದ್ಯುತ್ ಮಾರ್ಗದ ಯುಜಿ ಕೇಬಲ್ ಅಳವಡಿಕೆ ಬಗ್ಗೆ ನಗರಪಾಲಿಕೆಗೆ ನೀಲಿನಕ್ಷೆ ನೀಡಬೇಕು. ಅಲ್ಲದೆ, ಕಾಮಗಾರಿ ನಡೆಯುವಾಗ ಸೆಸ್ಕ್ ಸಿಬ್ಬಂದಿ ಸ್ಥಳದಲ್ಲಿದ್ದು, ಕೆಲಸಗಾರರಿಗೆ ಯಾವುದೇ ಅಪಾಯವಾಗದಂತೆ ಎಚ್ಚರ ವಹಿಸಬೇಕು ಎಂದು ಮೇಯರ್ ಶಿವಕುಮಾರ್ ಸೂಚನೆ ನೀಡಿದರು.
ನಗರದಲ್ಲಿ ಯುಜಿ ಕೇಬಲ್ ಅಳವಡಿಕೆ ಸಂಬಂಧ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು, ಪಾಲಿಕೆ ಅಧಿಕಾರಿಗಳು, ಪಾಲಿಕೆ ಸದಸ್ಯರೊಂದಿಗೆ ಬುಧವಾರ ಪಾಲಿಕೆ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಿಸ್ತೃತ ಚರ್ಚೆ ಬಳಿಕ ಅವರು ಮಾತನಾಡಿದರು.
ನಗರದಲ್ಲಿ ಅವೈಜ್ಞಾನಿಕ ಕೇಬಲ್ ಅಳವಡಿಕೆಯಿಂದ ದೊಡ್ಡ ಸಮಸ್ಯೆ ಎದುರಿಸಬೇಕಾಗಿದೆ. ಇದರಿಂದ ಪಾಲಿಕೆಯಿಂದ ನಡೆಯುವ ಕುಡಿಯುವ ನೀರು, ಯುಜಿಡಿ, ಚರಂಡಿ ಮತ್ತು ರಸ್ತೆ ಕಾಮಗಾರಿ ಮಾಡುವಾಗ ಅಪಾಯವಾಗುವ ಸಾಧ್ಯತೆ ಇದೆ. ನಗರದ ಯಾವ ಮಾರ್ಗದಲ್ಲಿ 11 ಕೆವಿ ಲೈನ್ ಹಾದು ಹೋಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲದ ಕಾರಣ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದೊಮ್ಮೆ ಕಾಮಗಾರಿ ನಡೆಸಲು ಮುಂದಾದರೆ ಅಪಾಯವಾಗಿ ಕಾಮಗಾರಿ ನಡೆಸುವ ಜನರ ಪ್ರಾಣಕ್ಕೆ ಕುತ್ತಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ 11 ಕೆವಿ ವಿದ್ಯುತ್ ಲೈನ್ ಹಾದು ಹೋಗಿರುವ ಮಾರ್ಗಗಳ ಬಗ್ಗೆ ತಕ್ಷಣವೇ ಗುರುತಿಸಲು ವಿನ್ಯಾಸ, ಡ್ರಾಯಿಂಗ್ ಕೊಡಬೇಕು. ತುರ್ತು ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ಸಂಬಂಧಿಸಿದ ಸೆಸ್ಕ್ ಇಂಜಿನಿಯರ್‌ಗಳು ಸ್ಥಳಕ್ಕೆ ಬಂದು ತೋರಿಸಬೇಕು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಪಾಲಿಕೆಯೊಂದಿಗೆ ಸಮನ್ವಯದಿಂದ ನೆರವಾಗಬೇಕು ಎಂದು ಕೋರಿದರು.

ಅಳವಡಿಸುವ ವಿದ್ಯುತ್ ಮಾರ್ಗಗಳಿಗೆ ಸಂಬಂಧಿಸಿದ ಡ್ರಾಯಿಂಗ್, ಡಿಸೈನ್ ಅನ್ನು ನಗರಪಾಲಿಕೆಗೆ ಕೊಡುವ ಜತೆಗೆ, ಮುಂದಿನ ದಿನಗಳಲ್ಲಿ ಅವೈಜ್ಞಾನಿಕವಾಗಿ ಅಳವಡಿಸಿರುವ ಯುಜಿ ಕೇಬಲ್‌ಗಳನ್ನು ಬದಲಿಸಬೇಕು. ಮುಖ್ಯವಾಗಿ ಕಾಮಗಾರಿ ನಡೆಸುವಾಗ ಏನಾದರೂ ತೊಂದರೆಯಾದಲ್ಲಿ ಅದನ್ನು ಗುತ್ತಿಗೆದಾರರ ಮೇಲೆ ಹಾಕಿ ದಂಡ ವಸೂಲಿ ಮಾಡುವುದನ್ನು ಕೈ ಬಿಡಬೇಕು ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಅವರಿಗೆ ಮನವಿ ಮಾಡಿದರು.

ಯುಜಿಸಿ, ಫೈಪ್ ಲೈನ್ ಗೆ ಸೇರ್ಪಡೆ:

ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಮೇಶ್ ಮಾತನಾಡಿ, ನಗರದಲ್ಲಿ 11 ಕೆವಿ ಲೈನ್ ಮತ್ತು ಯುಜಿ ಕೇಬಲ್ ಅಳವಡಿಸುವಾಗ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕೆಲಸ ಆಗಿಲ್ಲ. ಸ್ಥಳ ಪರಿಶೀಲನೆ ನಡೆಸಿದಾಗ ಹಲವಾರು ನ್ಯೂನತೆ ಕಂಡು ಬಂದಿರುವ ಕಾರಣ ಸರಿಪಡಿಸುವಂತೆ ಹಲವು ಬಾರಿ ಪತ್ರ ವ್ಯವಹಾರ ಮಾಡಿದರೂ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.
ಏಕರೂಪವಾಗಿ ಎಚ್‌ಟಿಪಿ ಪೈಪ್, ಯುಪಿ ಪೈಪ್‌ಗಳನ್ನು ಅಳವಡಿಸದೆ ಬೇರೆ ಬೇರೆ ಕೇಬಲ್‌ಗಳನ್ನು ಅಳವಡಿಸಲಾಗುತ್ತಿದೆ. ಕೆಲವು ಮಾರ್ಗಗಳಲ್ಲಿ ಯುಜಿಡಿ, ವಾಟರ್ ಪೈಪ್ ಲೈನ್‌ಗೆ ವಿದ್ಯುತ್ ಕೇಬಲ್‌ಗಳು ಸೇರಿಕೊಂಡಿದೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವ ಜತೆಗೆ 11 ಕೆವಿ ಲೈನ್ ಹಾದು ಹೋಗಿರುವ ಮಾರ್ಗಗಳನ್ನು ಗುರುತಿಸಿ ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು. ಯುಜಿ ಕೇಬಲ್ ಪತ್ತೆ ಸ್ಕ್ಯಾನರ್‌ಗಳನ್ನು ಸೆಸ್ಕ್‌ನಿಂದ ಪಾಲಿಕೆಗೆ ನೀಡಿದರೆ ಕೆಲಸ ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಸದಸ್ಯ ಕೆ.ವಿ.ಶ್ರೀಧರ್ ಮಾತನಾಡಿ, ಯುಜಿ ಕೇಬಲ್‌ಗಳನ್ನು ಗುರುತಿಸಲು ಅನುಕೂಲವಾಗುವಂತೆ ಸ್ಕಾೃನರ್, ಜಿಪಿಎಸ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಉಪ ಮೇಯರ್ ಡಾ.ಜಿ.ರೂಪಾ, ಮಾಜಿ ಮೇಯರ್ ಅಯೂಬ್ ಖಾನ್, ಪುಷ್ಪಲತಾ ಜಗನ್ನಾಥ್, ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಸದಸ್ಯರಾದ ಪುಷ್ಪಲತಾ, ಪ್ರೇಮಾಶಂಕರೇಗೌಡ, ಸತ್ಯರಾಜ್, ಎಚ್.ಎಂ.ಶಾಂತಕುಮಾರಿ, ಲಕ್ಷ್ಮೀ ಶಿವಣ್ಣ, ಬಿ.ವಿ.ಮಂಜುನಾಥ್, ಒಳಚರಂಡಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಸಿಂಧು ಇದ್ದರು.

ಸಮನ್ವಯದಿಂದ ಕೆಲಸ
ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡುವ ಎರಡೂ ಇಲಾಖೆಗಳು ಪರಸ್ವರ ಸಮನ್ವಯದಿಂದ ಕೆಲಸ ಮಾಡಲಿವೆ ಎಂದು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಹೇಳಿದರು.
ನಗರಪಾಲಿಕೆಯಿಂದ ತುರ್ತು ಸಮಸ್ಯೆಗಳನ್ನು ಪಟ್ಟಿ ಮಾಡಿಕೊಟ್ಟರೆ ತಕ್ಷಣ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು. 11 ಕೆವಿ ಲೈನ್ ಅಳವಡಿಸುವ ಕಾಮಗಾರಿ ಶೇ.90ರಷ್ಟು ಮುಗಿದಿದ್ದು, ಒಂದು ಮೀಟರ್‌ಗಿಂತ ಕೆಳಗೆ ಹೂಳಲಾಗಿದೆ. ಫುಟ್‌ಪಾತ್‌ಗಳಲ್ಲಿ ವಿದ್ಯುತ್ ಲೈನ್ ಹಾಕಬಾರದು ಎಂದು ಸುಪ್ರೀಂಕೋರ್ಟ್ ನಿರ್ದೇಶನವಿದೆ. ಮುಂದೆ ಎಲ್ಲಿ ಕೇಬಲ್ ಅಳವಡಿಸಬೇಕು, ಈಗ ಎಲ್ಲಿ ಅಳವಡಿಸಲಾಗಿದೆ ಎನ್ನುವ ನೀಲಿನಕ್ಷೆಯನ್ನು ನಗರಪಾಲಿಕೆಗೆ ಕೊಡಲಾಗುವುದು. ತುರ್ತು ಕಾಮಗಾರಿ ಇದ್ದಾಗ ಎರಡು ದಿನ ಮುಂಚಿತವಾಗಿ ತಿಳಿಸಿದರೆ ಸೆಸ್ಕ್ ಸಿಬ್ಬಂದಿಯನ್ನು ನಿಯೋಜಿಸಿ ಮುಂಜಾಗ್ರತಾ ಕ್ರಮಕೈಗೊಳ್ಳಲು ಸಹಕಾರಿ ಅಗುತ್ತದೆ ಎಂದು ತಿಳಿಸಿದರು.