ಜಿಲ್ಲೆ

ಅವೈಜ್ಞಾನಿಕ ಕಾಯ್ದೆ ಹಿಂಪಡೆಯದಿದ್ದರೆ ಹೋರಾಟ

ಚಿತ್ರದುರ್ಗ: ಕಲ್ಲು ಗಣಿಗಾರಿಕೆ ಸಂಬಂಧ ಅಳವಡಿಸಿರುವ ಅವೈಜ್ಞಾನಿಕ ಕಾಯ್ದೆ ಹಿಂಪಡೆಯದಿದ್ದರೆ, 2025ರ ಜನವರಿಯಲ್ಲಿ ಕ್ರಷರ್‌ಗಳನ್ನು ಸಂಪೂರ್ಣ ಬಂದ್ ಮಾಡಿ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯುವುದಾಗಿ ಜಿಲ್ಲಾ ಕ್ವಾರಿ ಮತ್ತು ಸ್ಟೋನ್ ಕ್ರಷರ್‌ಗಳ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಎಚ್ಚರಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದಲೂ ಬೇಡಿಕೆಗಳು ಈಡೇರಿಲ್ಲ. ಪ್ರಮುಖ ಸಮಸ್ಯೆ ಇತ್ಯರ್ಥಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.

ಗುತ್ತಿಗೆದಾರರು ಮತ್ತು ಕ್ರಷರ್‌ಗಳಿಂದಲೂ ಎರಡು ಬಾರಿ ರಾಜಧನ ವಸೂಲಿ ಮಾಡುತ್ತಿದೆ. ಇದೆಲ್ಲ ಬೆಳವಣಿಗೆ ಗಮನಿಸಿದರೆ, ಸಣ್ಣ-ಪುಟ್ಟ ಕ್ರಷರ್‌ಗಳನ್ನು ಸಂಪೂರ್ಣ ಮುಚ್ಚಿಸಿ, ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.

ಸರ್ಕಾರದ ನಿಯಮಗಳಿಂದ ನಮಗೆ ಹೊರೆಯಾಗಿದೆ. ಒಂದೇ ಹಂತದಲ್ಲಿ ಸರ್ಕಾರವೇ ಇಸಿ ವಿತರಿಸುವಂತ ಸರಳ ಕ್ರಮ ಜಾರಿಗೊಳಿಸಬೇಕು. ಪ್ರಮುಖ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗಲಿದ್ದೇವೆ. ಒಂದು ಜಲ್ಲಿ ಕಲ್ಲು ಕೂಡ ಹೊರ ರಾಜ್ಯಗಳಿಂದ ಕರ್ನಾಟಕ ಪ್ರವೇಶಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಮುಖಂಡ ಜಿ.ಸಿ.ಸುರೇಶ್‌ಬಾಬು ಮಾತನಾಡಿ, ಐದು ಪಟ್ಟು ದಂಡ ವಿಧಿಸುತ್ತಿದ್ದು, ಇದರ ಬದಲು ಹೆಕ್ಟೇರ್‌ಗೆ 5 ಲಕ್ಷ ರೂ.ವರೆಗೂ ದಂಡ ನಿಗದಿಗೊಳಿಸಿ, ಪ್ರಕರಣ ಮುಕ್ತಾಯಗೊಳಿಸಬೇಕು. ಅವೈಜ್ಞಾನಿಕವಾಗಿ ವಿದ್ಯುತ್ ಬಿಲ್ ಪಡೆಯುವುದನ್ನು ಸ್ಥಗಿತಗೊಳಿಸಬೇಕು. ಸರಕು ಸರಬರಾಜು ಮಾಡುವ ಕಲ್ಲು ಕ್ರಷರ್ ಲಾರಿ, ಟ್ರಾೃಕ್ಟರ್‌ಗಳಿಗೆ ಅಳವಡಿಸಿರುವ ಜಿಪಿಎಸ್ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.

ಸಂಘದ ಪದಾಧಿಕಾರಿಗಳಾದ ಜಿ.ಬಿ.ಶೇಖರ್, ವೀರಭದ್ರಣ್ಣ, ವೆಂಕಟೇಶ್, ಮಲ್ಲಿಕಾರ್ಜುನ್, ಅಭಿಷೇಕ್ ಇತರರಿದ್ದರು.