ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ಬೈರಾಪುರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಶೆಟ್ಟಿ) ಬಣದ ಕಾರ್ಯಕರ್ತರು ಬುಧವಾರ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು. ಸತೀಶ್ ಪಾಟೀಲ್, ಎಚ್.ವಿ.ರಾಘವೇಂದ್ರ, ವೆಂಕಟೇಶ್, ಸಾವಿತ್ರಿ ಗಂಗಾಧರ್ ಇತರರು ಇದ್ದರು. 
ಜಿಲ್ಲೆ

ಅವೈಜ್ಞಾನಿಕ ಕಾಮಗಾರಿ ವಿರುದ್ಧ ಪ್ರತಿಭಟನೆ

ಆಲೂರು: ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಕಳೆದ 8 ವರ್ಷಗಳಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಪದೇ ಪದೆ ಅಪಘಾತಗಳಿಗೆ ಕಾರಣವಾಗುತ್ತಿದೆ. ಹೀಗಾಗಿ, ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಬಣದ ಕಾರ್ಯಕರ್ತರು ಬುಧವಾರ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು.

ಬುಧವಾರ ತಾಲೂಕಿನ ಬೈರಾಪುರ ಗ್ರಾಮದ ಬಳಿ ಇರುವ ಹೆದ್ದಾರಿ ಸಂಚಾರ ತಡೆದ ಪ್ರತಿಭಟನಾಕಾರರು, ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಬೈರಾಪುರ ಬಳಿ ಆಲೂರು-ಮಗ್ಗೆ ಹೋಗುವ ಅಂಡರ್‌ಪಾಸ್ ಹಾಗೂ ರಸ್ತೆ ಕಾಮಗಾರಿ ಮಂದಗತಿಯಿಂದ ಕೂಡಿದೆ. ಹೀಗಾಗಿ ದಿನನಿತ್ಯ ಅಪಘಾತಕ್ಕೆ ಎಡೆ ಮಾಡಿಕೊಡುತ್ತಿದೆ. ಸಕಲೇಶಪುರದಿಂದ ಹಾಸನಕ್ಕೆ ಸಾರಿಗೆ ಬಸ್‌ಗಳು ಆಲೂರು ಪಟ್ಟಣಕ್ಕೆ ಬಾರದೆ ಬೈಪಾಸ್ ಮೂಲಕ ಹೋಗುತ್ತಿವೆ. ಸರ್ವಿಸ್ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರವೇ ಜಿಲ್ಲಾಧ್ಯಕ್ಷ ಸತೀಶ್ ಪಾಟೀಲ್ ಮಾತನಾಡಿ, ಚತುಷ್ಪಥ ಕಾಮಗಾರಿ ಆರಂಭದಿಂದಲೂ ಸಮಸ್ಯೆಗಳಿಂದ ಕೂಡಿದ್ದು, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಪಘಾತ ಸಂಭವಿಸುತ್ತಿವೆ. ತಿರುವುಗಳಿಗೆ ನಾಮಫಲಕ ಅಳವಡಿಕೆ, ಸರ್ವಿಸ್ ರಸ್ತೆ ಬೇಡಿಕೆ ಈಡೇರಿಸಿಲ್ಲ. ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಲ್ಲುವ ಪರಿಣಾಮ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಹಲವು ಬಾರಿ ಮನವಿ ನೀಡಿದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮನ್ನಣೆ ನೀಡುತ್ತಿಲ್ಲ. ಜನರ ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದಲ್ಲಿ ಮುಂದಿನ ದಿನದಲ್ಲಿ ಸರಣಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಅಧ್ಯಕ್ಷ ಎಚ್.ವಿ.ರಾಘವೇಂದ್ರ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಜತೆಗೆ ಈಗಾಗಲೇ ಗುರುತಿಸಲಾಗಿರುವ ಅಪಘಾತ ವಲಯಗಳಲ್ಲಿ ಸಿಗ್ನಲ್ ಅಳವಡಿಕೆ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಆಲೂರು ಪಟ್ಟಣಕ್ಕೆ ಆಗಮಿಸುವ ನೆರ್ಲಿಕೆರೆ ಕೂಡಿಗೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ 15 ದಿನದಲ್ಲಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಕರವೇ ಮುತ್ತಿಗೆ ಹಾಕಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಆಗಮಿಸಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಮಂಜುನಾಥ್, ಎಲ್ಲ ಬಸ್‌ಗಳು ಆಲೂರು ಮಾರ್ಗವಾಗಿ ಸಂಚರಿಸುವಂತೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರಿಂದ ಚಾಲಕರು ಮತ್ತು ನಿರ್ವಾಹಕರಿಗೆ ಸೂಚಿಸುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್, ಹಾಸನ ತಾಲೂಕು ಮಹಿಳಾ ಅಧ್ಯಕ್ಷೆ ಸಾವಿತ್ರಿ ಗಂಗಾಧರ್, ಸದಸ್ಯೆ ಅರುಣಾ, ನಗರ ಅಧ್ಯಕ್ಷ ಗುರುಗೌಡ, ಸದಸ್ಯರಾದ ಭಾಸ್ಕರ, ರಮೇಶ್ ಪೂಜಾರಿ, ವೆಂಕಟೇಶ್ ಮಾರ್ಗನಹಳ್ಳಿ, ಜ್ಞಾನೇಶ್ ತಟ್ಟೆಕೆರೆ, ತಾಲೂಕು ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಮುಖಂಡರಾದ ಎಚ್.ಬಿ.ಧರ್ಮರಾಜ್, ಮೂರ್ತಿ, ಸಿವಿ ಲಿಂಗರಾಜು, ರುದ್ರೇಗೌಡ, ಗಣೇಶ್, ಬಾಲಕೃಷ್ಣ, ಕೃಷ್ಣೇಗೌಡ, ವೀರಭದ್ರಸ್ವಾಮಿ, ಸಿ.ಡಿ.ಅಶೋಕ್, ಗಿರೀಶ್, ಮಲ್ಲೇಶ್, ಗಣೇಶ್, ಮನು ಇತರರು ಇದ್ದರು.