ಜಿಲ್ಲೆ

ಅವಿಶ್ವಾಸ ಮಂಡಿಸಿದ್ದವರಿಗೆ ಮುಖಭಂಗ

ಕೆ.ಆರ್.ಪೇಟೆ: ತಾಲೂಕಿನ ಮಾಕವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಸಿ.ರವಿಕುಮಾರ್ ವಿರುದ್ಧ 8 ಸದಸ್ಯರು ಮಂಡಿಸಿದ್ದ ಅವಿಶ್ವಾಸ ಸನಿರ್ಣಯಕ್ಕೆ ಸೋಲಾಗಿದೆ.

ಗುರುವಾರ ಡೇರಿ ಕಚೇರಿಯಲ್ಲಿ ಅವಿಶ್ವಾಸ ಸಾಬೀತಿಗೆ ಬೆಳಗ್ಗೆ 11 ಗಂಟೆಗೆ ಸಭೆ ಕರೆಯಲಾಗಿತ್ತು. ಆದರೆ ಸಭೆಗೆ ಅವಿಶ್ವಾಸ ಮಂಡಿಸಿದ್ದವರು ಸೇರಿದಂತೆ ಯಾವುದೇ ನಿರ್ದೇಶಕರು ಹಾಜರಾಗಿರಲಿಲ್ಲ. ಸಭೆಯನ್ನು ಒಂದು ಗಂಟೆಗಳ ಕಾಲ ಮುಂದೂಡಿದರೂ ಯಾರು ಬಾರದ ಹಿನ್ನೆಲೆಯಲ್ಲಿ ಅಧ್ಯಕ್ಷರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದೆ ಎಂದು ಪಾಂಡವಪುರದ ಸಹಕಾರ ಸಂಘಗಳ ಹಿರಿಯ ನಿರೀಕ್ಷಕ ಕೆ.ಎಂ.ಆನಂದನಾಕ ಅವರು ಘೋಷಿಸಿ ಸಭೆ ಮುಕ್ತಾಯ ಮಾಡಿದರು.

ಆಡಳಿತ ಮಂಡಳಿಯಲ್ಲಿ ಚುನಾಯಿತ 11 ನಿರ್ದೇಶಕರ ಪೈಕಿ 8 ನಿರ್ದೇಶಕರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಇದರಲ್ಲಿ ಒಬ್ಬ ನಿರ್ದೇಶಕ ಅಧ್ಯಕ್ಷರ ಪರ ಇದ್ದರು. ಮತ್ತಿಬ್ಬರ ಸದಸ್ಯತ್ವ ಸಹಕಾರ ಸಂಘಗಳ ಕಾಯ್ದೆ ಕಲಂ 29 ಸಿ ಪ್ರಕಾರ ರದ್ದಾಗಿತ್ತು. ಸಭೆಯ ಕೋರಂಗೆ 7 ಜನ ಕಡ್ಡಾಯವಾಗಿದ್ದರಿಂದ ಸೋಲಾಗಲಿದೆ ಎಂದು ಅವಿಶ್ವಾಸ ಮಂಡಿಸಿದ್ದವರು ಸಭೆಗೆ ಬಂದಿರಲಿಲ್ಲ. ಅಧ್ಯಕ್ಷರ ಕಡೆ ನಾಲ್ವರು ಚುನಾಯಿತ, ಒಬ್ಬರು ಸರ್ಕಾರಿ ನಾಮನಿರ್ದೇಶಕರಿದ್ದರು.

ಸೋಲುಂಟಾದ ಹಿನ್ನೆಲೆಯಲ್ಲಿ ಅವಿಶ್ವಾಸ ಮಂಡಿಸಿದ್ದ 8 ನಿರ್ದೇಶಕರು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷರ ಸ್ಥಾನ ಉಳಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಪಟಾಕಿ ಸಿಡಿಸಿ, ಸಿಹಿ ಹಂಚಲಾಯಿತು.

ನಿರ್ದೇಶಕರಾದ ದೇವರಸೇಗೌಡ, ಪೋಸ್ಟ್ ರಾಜೇಗೌಡ, ಚಿಕ್ಕೇಗೌಡ, ಮಂಜೇಗೌಡ, ಮುಖಂಡರಾದ ಪದ್ದೇಗೌಡ, ಆನಂದಯ್ಯ, ನಾಗೇಂದ್ರಶೆಟ್ಟಿ, ಕೆಂಗೇಗೌಡ, ದಾಸೇಗೌಡ, ಯೋಗಮೂರ್ತಿ, ಕೋಟಿ ಪುಟ್ಟೇಗೌಡ, ವಡ್ಡರಹಳ್ಳಿ ಶಿವಕುಮಾರ್, ಕಿರಣ್ ಡಿ.ಆರ್. , ಎಂ.ಡಿ.ಕುಮಾರ್, ಕೇಶವ್, ಹರೀಶ್, ದಿಲೀಪ್, ಕುಮಾರ್ ಸೇರಿ ಹಲವರಿದ್ದರು.