ಮುಂಡಗೋಡ: ತಾಲೂಕಿನಾದ್ಯಂತ ನಾಲ್ಕೈದು ದಿನಗಳಿಂದ ಬಿಡುವು ಕೊಡದೆ ಸುರಿಯುತ್ತಿರುವ ಮಳೆಯಿಂದಾಗಿ ಗೋವಿನ ಜೋಳ ಮತ್ತು ಭತ್ತದ ಬೆಳೆ ಹಾನಿಯಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಪಟ್ಟಣ ಸೇರಿದಂತೆ ತಾಲೂಕಿನ ಬಾಚಣಕಿ, ನ್ಯಾಸರ್ಗಿ, ಚವಡಳ್ಳಿ, ತಮ್ಯಾನಕೊಪ್ಪ, ಕ್ಯಾಸನಕೇರಿ ಹಾಗೂ ಅನೇಕ ಗ್ರಾಮಗಳ ರೈತರ ಗೋವಿನ ಜೋಳ ಮತ್ತು ಭತ್ತದ ಬೆಳೆ ಹಾನಿಯಾಗಿವೆ. ಗೋವಿನ ಜೋಳದ ತೆನೆಗಳು ಮುರಿಯುವ ಹಂತಕ್ಕೆ ಬಂದಿದ್ದು, ಅತಿಯಾದ ಮಳೆ-ಗಾಳಿಗೆ ನೆಲಕ್ಕೆ ಬಿದ್ದು ತೆನೆಗಳಲ್ಲೆ ಮೊಳಕೆಯೊಡೆಯಲಾರಂಭಿಸಿವೆ. ಭತ್ತದ ಪೈರು ನೆಲಕಚ್ಚಿದೆ. ಎಸ್.ಎಸ್. ಪಾಟೀಲ ಎಂಬುವವರ ಮೂರು ಎಕರೆ, ಅಮಿತ ಬಾಡ್ಕರ ಎಂಬುವವರ 10 ಎಕರೆ, ಹನುಮಂತ ಕೊಮರಶಿಕೊಪ್ಪ ಎಂಬುವವರ 3 ಎಕರೆ, ಎನ್.ಎಚ್. ಬೆಂಡಲಗಟ್ಟಿ ಎಂಬುವವರ 6 ಎಕರೆ, ಪರಮೇಶ್ವರ ಪಾಟೀಲರ 2 ಎಕರೆ ಗೋವಿನಜೋಳದ ಬೆಳೆ ಸಂಪೂರ್ಣ ಹಾನಿಗೀಡಾಗಿದೆ. ಶಿವಾನಂದ ಗರಗದ ಅವರ 2 ಎಕರೆ ಹಾಗೂ ಚಂದ್ರಶೇಖರ ಪಾಟೀಲರ 2 ಎಕರೆ ಭತ್ತ ಸೇರಿ ಮತ್ತಿತರ ರೈತರ ಬೆಳೆಗಳು ಹಾನಿಗೀಡಾಗಿವೆ.
ಇಷ್ಟೆಲ್ಲಾ ಖರ್ಚು ಮಾಡಿ ಕಷ್ಟಪಟ್ಟು ಬೆಳೆದ ಬೆಳೆ ಇನ್ನೇನು ಕೈಗೆ ಸಿಗುವ ಹೊತ್ತಿನಲ್ಲಿ ಅತಿಯಾದ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೋವಿಡ್ನಿಂದ ಕಂಗಾಲಾಗಿದ್ದ ರೈತರಿಗೆ ಇದು ಸಹಿಸಲಾಗದ ಪೆಟ್ಟು ನೀಡುತ್ತಿದೆ. | ಎಸ್.ಎಸ್. ಪಾಟೀಲಹಳೂರ ಓಣಿ ನಿವಾಸಿ