ಜಿಲ್ಲೆ

ಅವಹೇಳನಕಾರಿ ಪೋಸ್ಟ್‌ಗೆ ಲಗಾಮು!

ಜಗದೀಶ ಹೊಂಬಳಿ, ಬೆಳಗಾವಿ: ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುವಂತಿಲ್ಲ. ಹಾಕಿದರೆ ಸಾಮಾಜಿಕ ಜಾಲತಾಣಗಳ ನಿಗಾ ಘಟಕದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮ ಜರುಗಿಸುತ್ತಾರೆ ಹುಷಾರ್!.

ಮೊಬೈಲ್, ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವೀಟರ್ ಸೇರಿ ಇತರ ಜಾಲತಾಣದ ಮೂಲಕ ಪೋಸ್ಟ್‌ಗಳನ್ನು ಹಾಕಿ ಸಮಾಜದ ಸ್ವಾಸ್ಥೃ ಹಾಳು ಮಾಡುವವರಿಗೆ ಬ್ರೇಕ್ ಹಾಕುವುದಕ್ಕೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ ಘಟಕ ತೆರೆಯಲಾಗಿದೆ. ಮೂವರು ಪೊಲೀಸ್ ಸಿಬ್ಬಂದಿಯನ್ನು ಘಟಕಕ್ಕೆ ನಿಯೋಜಿಸಲಾಗಿದೆ. ಕಳೆದ ಒಂದು ತಿಂಗಳಿಂದ ಈ ಘಟಕ ಕಾರ್ಯ ನಿರ್ವಹಿಸುತ್ತಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸುತ್ತಿದೆ. ಈ ಕುರಿತಂತೆ ಪೊಲೀಸ್ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ.

ಪ್ರಸ್ತುತ ಎಲ್ಲರ ಕೈಯಲ್ಲೂ ಮೊಬೈಲ್ ಇರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲ-ಸಲ್ಲದ ಪೋಸ್ಟ್ ಹಾಕುವ ಪ್ರಕರಣಗಳು ಹೆಚ್ಚಿವೆ. ಇದರಿಂದ ವ್ಯಕ್ತಿಗಳ ವೈಯಕ್ತಿಕ ವಿಚಾರಗಳಿಗೆ, ಜಾತಿ, ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ. ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಠಾಣೆಗಳಲ್ಲಿ ಪ್ರತ್ಯೇಕ ಘಟಕಗಳನ್ನು ತೆರೆಯಲಾಗಿದ್ದು, ಇನ್ನು ಮುಂದೆ ಪೋಸ್ಟ್ ಹಾಕಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

2020ರಿಂದ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡುವುದಕ್ಕೆ ಆರಂಭಿಸಿದ್ದಾರೆ. ಆದರೆ, ಪರಿಣಾಮಕಾರಿಯಾಗಿರಲಿಲ್ಲ. ಈಗ ಠಾಣೆಗಳಲ್ಲಿ ಪ್ರತ್ಯೇಕವಾಗಿ ‘ಸಾಮಾಜಿಕ ಜಾಲತಾಣಗಳ ನಿಗಾ ಘಟಕ’ ತೆರೆಯಲಾಗಿದೆ. ಈ ಘಟಕಗಳಲ್ಲಿ ಮೂವರು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಇವರ ಮೇಲೆ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಇದ್ದಲ್ಲಿ ಓರ್ವ ಎಸಿಪಿ ಹಾಗೂ ನಾಲ್ವರು ಇನ್‌ಸ್ಪೆಕ್ಟರ್‌ಗಳ ತಂಡ ಉಸ್ತುವಾರಿ ವಹಿಸಿಕೊಂಡಿರುತ್ತದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ವ್ಯಾಪ್ತಿಯ ಠಾಣೆಗಳಲ್ಲೂ ಇದೇ ವ್ಯವಸ್ಥೆ ತರಲಾಗಿದೆ. ಅವಹೇಳನಕಾರಿ ಪೋಸ್ಟ್ ಹಾಕುವವರ ಮೇಲೆ ಪ್ರಕರಣ ದಾಖಲಿಸುವುದು, ಆರೋಪಿಗಳನ್ನು ಠಾಣೆಗೆ ಹಾಜರುಪಡಿಸಿ, ತನಿಖೆ ನಡೆಸುತ್ತಾರೆ. ನಗರದ ಖಡೇಬಜಾರ್ ಠಾಣೆ, ಮಾರ್ಕೇಟ್, ಎಪಿಎಂಸಿ ಠಾಣೆಯಲ್ಲಿ ಸಾಮಾಜಿಕ ಜಾಲತಾಣಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿರುವ ಕುರಿತಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಳಗಾವಿ ಪೊಲೀಸರಿಂದ 5 ಜಿಲ್ಲೆಗೆ ತರಬೇತಿ: ಒಟ್ಟಾರೆ ಕೇಸ್‌ಗಳನ್ನು ದಾಖಲಿಸುವುದು, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡುವುದರಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ರೇಟಿಂಗ್ ಮಾಡಿದ್ದರು. ಅದರಲ್ಲಿ ಬೆಳಗಾವಿ ಉತ್ತರ ವಲಯದಲ್ಲಿ ಬೆಳಗಾವಿ ನಗರವು ಮೊದಲ ಸ್ಥಾನದಲ್ಲಿದೆ. ಹೀಗಾಗಿ ಬೆಳಗಾವಿ ನಗರ ಪೊಲೀಸರು ಬೆಳಗಾವಿ, ಗದಗ, ಧಾರವಾಡ, ಬಾಗಲಕೋಟೆ ವಿಜಯಪುರ ಜಿಲ್ಲೆಗಳ ಪೊಲೀಸರಿಗೆ ಈ ಬಗ್ಗೆ ತರಬೇತಿ ನೀಡಿದ್ದಾರೆ. ಪೊಲೀಸ್ ಮಹಾನಿರ್ದೇಶಕರಾಗಿ ಅಲೋಕಕುಮಾರ್ ಬಂದ ನಂತರ ಇಂತಹ ಪ್ರಕರಣಗಳನ್ನು ತಡೆಗಟ್ಟುವುದಕ್ಕೆ ಕ್ರಮ ಕೈಗೊಂಡಿದ್ದಾರೆ.

ಖಾಕಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ: ಬೆಳಗಾವಿ ಗಡಿ ಜಿಲ್ಲೆ ಸೂಕ್ಷ್ಮ ಪ್ರದೇಶ ಸಾಮಾಜಿಕ ಜಾಲತಾಣದಲ್ಲಿ ಇಲ್ಲ-ಸಲ್ಲದ ಪೋಸ್ಟ್‌ಗಳನ್ನು ಹಾಕಿ ಗದ್ದಲ ಎಬ್ಬಿಸಿದ ಘಟನೆಗಳು ನಡೆದು ಹೋಗಿವೆ. ಅಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಸಾಮಾಜಿಕ ಜಾಲತಾಣಗಳ ನಿಗಾ ಘಟಕ ತೆರೆದು ಹದ್ದಿನ ಕಣ್ಣಿಟ್ಟಿರುವುದು ನಾಗರಿಕರ ಮೆಚ್ಚುಗೆಗೆ ಕಾರಣವಾಗಿದೆ.

ಕರ್ನಾಟಕ ಪೊಲೀಸ್ ಮಹಾನಿರ್ದೇಶರಾದ ಅಲೋಕ ಮೋಹನ ಅವರು ಸಾಮಾಜಿಕ ಜಾಲತಾಣಗಳ ನಿಗಾ ಘಟಕದ ತೆರೆಯುವಂತೆ ನಿರ್ದೇಶನ ನೀಡಿದ್ದರು. ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ತಿಂಗಳ ಹಿಂದೆ ಘಟಕ ತೆರೆದು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.| ಎಸ್.ಎನ್. ಸಿದ್ದರಾಮಪ್ಪ, ಮಹಾನಗರ ಪೊಲೀಸ್ ಆಯುಕ್ತ, ಬೆಗಾವಿ
ಪೊಲೀಸ್ ಠಾಣೆಗಳ ಸಾಮಾಜಿಕ ಜಾಲತಾಣಗಳ ನಿಗಾ ಘಟಕದ ಸಿಬ್ಬಂದಿಗೆ ತರಬೇತಿ ನೀಡಿ ಕರ್ತವ್ಯಕ್ಕೆ ಅಣಿಗೊಳಿಸಲಾಗಿದೆ. ಜನರು ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಇಲ್ಲದಿದ್ದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ.| ಶೇಖರ ಎಚ್.ಟಿ., ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ