ಮೈಸೂರು: ಹಸಿರು ಕ್ರಾಂತಿ, ಕ್ಷೀರ ಕ್ರಾಂತಿಯಿಂದಾಗಿ ಭಾರತೀಯ ಗೋ ತಳಿ ಸಂತತಿಗೆ ಕಂಟಕ ಎದುರಾಯಿತು. ಇದರ ಫಲವಾಗಿ ವಿದೇಶಿ ಗೋ ತಳಿಗಳು ದೇಶವನ್ನು ಪ್ರವೇಶಿಸಿ ಹೈನುಗಾರಿಕೆ, ಕೃಷಿ ವ್ಯವಸ್ಥೆ ಮೇಲೆಯೇ ದುಷ್ಪರಿಣಾಮ ಬೀರಿವೆ ಎಂದು ಆರ್ಥಿಕ ತಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಸ್ವದೇಶಿ ಜಾಗರಣ ಮಂಚ್ ವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಸ್ವದೇಶಿ ಮೇಳದಲ್ಲಿ ಶುಕ್ರವಾರ ‘ಗೋ ಆಧಾರಿತ ಆರ್ಥಿಕತೆ’ ಕುರಿತು ಮಾತನಾಡಿದರು.
ಆಹಾರ ಕೊರತೆ ನೀಗಿಸಿ ಆ ಕ್ಷಣದ ಅವಶ್ಯಕತೆ ಪೂರೈಸಲು ಜಾರಿಗೆ ತಂದ ಹಸಿರು ಕ್ರಾಂತಿ ಇಡೀ ಕೃಷಿ ಮೇಲೆಯೇ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ. ಅತಿಯಾಗಿ ರಸಗೊಬ್ಬರ, ಕ್ರಿಮಿನಾಶಕ, ಕಳೆನಾಶಕ ಬಳಕೆಯಿಂದ ಮಣ್ಣಿನ ಫಲವತ್ತತೆಯೇ ಹಾಳಾಗಿದೆ. ಜಾನುವಾರಗಳಿಗೆ ಮೇವು ಕೊರತೆ ಸೃಷ್ಟಿಯಾಗಿದೆ. ಪರಸ್ಪರ ಪೂರಕವಾಗಿದ್ದ ಕೃಷಿ-ಪಶುಪಾಲನೆ ಇದೀಗ ಸಂಬಂಧವಿಲ್ಲದಂತಾಗಿದೆ ಎಂದರು.
ರೈತರು ಜಾನುವಾರಗಳನ್ನು ಸಾಕುತ್ತಿಲ್ಲ. ಸಗಣಿ ಮುಟ್ಟಲು ಸಹ ಅಸಹ್ಯ ಪಡುವಂತಹ ಸ್ಥಿತಿಗೆ ರೈತರು ಬಂದಿದ್ದಾರೆ. ರಸಗೊಬ್ಬರ ಆಧಾರಿತ ಕೃಷಿ ಎಲ್ಲೆಡೆ ಕಂಡುಬರುತ್ತಿದೆ. ಇದಕ್ಕೆ ಸರ್ಕಾರ ಸಹ ಉತ್ತೇಜನ ನೀಡುತ್ತಿದೆ. ಇದರ ಫಲವಾಗಿ ಪಾರಂಪರಿಕ ಕೃಷಿ ಅವಸಾನದತ್ತ ಮುಖ ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕ್ಷೀರ ಕ್ರಾಂತಿ ಕೇವಲ ಹಾಲು ಉತ್ಪಾದನೆಗೆ ಒತ್ತು ನೀಡಿತೇ ಹೊರತು, ಸ್ವದೇಶಿ ಪಶುಗಳ ಸಂರಕ್ಷಣೆ, ಅಭಿವೃದ್ಧಿಗೆ ಗಮನ ನೀಡಲಿಲ್ಲ. ಬದಲಿಗೆ ವಿದೇಶಿ ಹಸುಗಳನ್ನು ಆಮದು ಮಾಡಿಕೊಂಡು ಭಾರತೀಯ ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡಲಾಗುತ್ತಿದೆ. ಇದರಿಂದ ಎಲ್ಲಿಯೂ ಶುದ್ಧ, ನೈಜ ಭಾರತೀಯ ತಳಿಗಳಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತೀಯ ಗೋವುಗಳು ಲಾಭದಾಯಕವಲ್ಲ. ಇವುಗಳನ್ನು ಕಸಾಯಿಖಾನೆಗಳಿಗೆ ಕಳುಹಿಸಬೇಕು ಎಂಬ ಮನೋಭಾವ ಬೇರೂರಿದೆ. ಇದು ಅವೈಜ್ಞಾನಿಕ. ಹಾಲು ಅಷ್ಟೇ ಅಲ್ಲ, ಅವುಗಳ ಇತರ ಸೇವೆಯನ್ನು ಆಧರಿಸಿ ಭಾರತೀಯ ಗೋ ತಳಿಗಳ ಕುರಿತು ಸಮಗ್ರ ಮೌಲ್ಯಮಾಪನ ಮಾಡಬೇಕು ಎಂದು ಸಲಹೆ ನೀಡಿದರು.
ಭಾರತೀಯ ಗೋ ತಳಿಗಳು ಸ್ಥಳೀಯ ಹವಾಮಾನ, ಉಷ್ಣಾಂಶವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿವೆ. ವಿದೇಶಿ ಗೋ ತಳಿಗಳು ಇಲ್ಲಿಯ ಪರಿಸರಕ್ಕೆ ಹೊಂದಾಣಿಕೆಯಾಗಲ್ಲ. ಹೀಗಾಗಿ, ಅವುಗಳು ಅನೇಕ ಕಾಯಿಲೆಗಳಿಗೆ ಸುಲಭವಾಗಿ ತುತ್ತಾಗುತ್ತವೆ. ಕೃಷಿ ಕಾರ್ಯಗಳಿಗೆ ಇವುಗಳನ್ನು ಬಳಸುವುದಿಲ್ಲ. ಸ್ವದೇಶಿ ಗೋ ತಳಿಗಳು ಸುಲಭವಾಗಿ ಕೃಷಿ ಚಟುವಟಿಕೆಗಳಿಗೆ ಒಗ್ಗಿಕೊಳ್ಳುತ್ತವೆ ಎಂದರು.
ವಿದೇಶಿ ಗೋ ತಳಿಗಳು ಹಾಲು ಕೊಡುವ ಯಂತ್ರದಂತಾಗಿವೆ. ಅದಕ್ಕಾಗಿ ಇಂಜೆಕ್ಷನ್, ಕೃತಕ ಆಹಾರ ನೀಡಲಾಗುತ್ತಿದೆ. ಇವುಗಳ ಹಾಲು ಹಾಲಲ್ಲ, ಅದು ಹಾಲಾಹಲ. ಅವುಗಳ ಕ್ಷೀರದಲ್ಲಿ ಅಗತ್ಯಕ್ಕಿಂತ ಹೆಚ್ಚು ಆ್ಯಂಟಿ ಬಯೋಟಿಕ್ ಇದ್ದು, ಅದನ್ನು ಸೇವನೆ ಮಾಡುವ ಜನರಲ್ಲಿ ವೈದ್ಯರು ನೀಡುವ ಆ್ಯಂಟಿ ಬಯೋಟಿಕ್ ವಿಫಲವಾಗುತ್ತಿದೆ. ಕಾಯಿಲೆಗಳೂ ಗುಣಮುಖವಾಗುತ್ತಿಲ್ಲ. ಇದರಿಂದ ಆರೋಗ್ಯ ತುರ್ತು ವ್ಯವಸ್ಥೆ ಸೃಷ್ಟಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಭಾರತೀಯ ಗೋ ತಳಿಗಳ ಸಾಕಣಿಕೆ ಸುಲಭ, ನಿರ್ವಹಣ ಸರಳ ಮತ್ತು ಖರ್ಚು ಸಹ ಕಡಿಮೆ. ಆದರೆ, ವಿದೇಶಿ ಗೋ ತಳಿಗಳ ನಿರ್ವಹಣೆ ಬಹಳ ದುಬಾರಿ ಎಂದರು.
ಸ್ವಾವಲಂಬಿ ಭಾರತ್ ಅಭಿಯಾನ ಕ್ಷೇತ್ರೀಯ ಸಮನ್ವಯಕ ಎನ್.ಆರ್.ಮಂಜುನಾಥ್ ಇನ್ನಿತರರಿದ್ದರು