ಕುಶಾಲನಗರ: ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಾವರೆಕೆರೆ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷೃದಿಂದಾಗಿ ಅವಸಾನದ ಅಂಚಿನಲ್ಲಿದೆ.
ತಾವರೆಕೆರೆಯನ್ನು ಪ್ರವಾಸಿ ತಾಣವಾಗಿ ರೂಪಿಸುವ ಸಂಬಂಧ ಈ ಹಿಂದೆ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬಿ.ಜಿ.ಮಂಜುನಾಥ್ ಗುಂಡೂರಾವ್ 2017-18ರಲ್ಲಿ ಅಂದಿನ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಮೊದಲ ಹಂತದಲ್ಲಿ ತಾವರೆಕೆರೆ ಅಭಿವೃದ್ಧಿಗಾಗಿ 20 ಲಕ್ಷ ರೂ. ಬಿಡುಗಡೆಯಾಗಿತ್ತು. ಬಳಿಕ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಾವರೆಕೆರೆ ಸಂಪರ್ಕಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲವೆಂದು ಸಬೂಬು ಹೇಳಿದ ಕಾರಣ ಬಿಡುಗಡೆಯಾಗಿದ್ದ 20 ಲಕ್ಷ ರೂ. ಅನುದಾನವನ್ನು ನಾಪೋಕ್ಲು ಸಮೀಪದ ಚೇಲಾವರ ಜಲಪಾತದ ಅಭಿವದ್ಧಿಗೆ ಬಳಸಿಕೊಳ್ಳಲಾಯಿತು.
ಈಗಾಗಲೇ ತಾವರೆಕೆರೆ ಅತಿಕ್ರಮಣಕ್ಕೊಳಗಾಗಿ ವಿಸ್ತಾರದಲ್ಲಿ ಚಿಕ್ಕದಾಗಿದೆ. ಪಟ್ಟಣದ ಕೊಳಚೆ ನೀರು ಸಂಗ್ರಹದಿಂದ ತ್ಯಾಜ್ಯದ ಗುಂಡಿಯಂತಾಗಿರುವ ತಾವರೆಕೆರೆ ರಕ್ಷಣೆಗೆ ಇದ್ದ ಏಕೈಕ ಮಾರ್ಗವೂ ಇದರಿಂದ ಮುಚ್ಚಿಹೋದಂತಾಗಿದೆ. ಕ್ಷುಲ್ಲಕ ಕಾರಣ ಕೊಟ್ಟು ಅನುದಾನದ ಮೊತ್ತವನ್ನು ಕುಶಾಲನಗರದಿಂದ ಚೇಲಾವರಕ್ಕೆ ತೆಗೆದುಕೊಂಡು ಹೋಗಿರುವ ಪ್ರವಾಸೋದ್ಯಮ ಇಲಾಖೆಯ ಕಾರ್ಯವೈಖರಿ ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಭೂಗಳ್ಳರ ಕಾಟ: ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕುಶಾಲನಗರದಿಂದ ಮಡಿಕೇರಿಗೆ ತೆರಳುವ ಮಾರ್ಗದ ಬದಿಯಲ್ಲಿ ಕುಶಾಲನಗರಕ್ಕೆ ಹೊಂದಿಕೊಂಡಂತೆಯೇ ತಾವರೆಕೆರೆ ಇದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಕೆರೆಯಲ್ಲಿ ಹೆಸರಿಗೆ ತಕ್ಕಂತೆ ಮೊದಲೆಲ್ಲ ಬಗೆಬಗೆಯ ತಾವರೆ ಹೂವು ಯಥೇಚ್ಛವಾಗಿ ಕಾಣಸಿಗುತ್ತಿತ್ತು. ಪಟ್ಟಣ ಬೆಳೆದಂತೆ ಭೂದಾಹಿಗಳು ಕೆರೆಯನ್ನು ಮೂರೂ ಕಡೆಯಿಂದಲೂ ಅತಿಕ್ರಮಿಸಿಕೊಂಡರು ಎಂಬ ಆರೋಪವಿದೆ. ದಾಖಲೆಗಳಲ್ಲಿ 4 ಎಕರೆ ವಿಸ್ತೀರ್ಣದ ಮಾಹಿತಿ ಇದ್ದರೂ ಈಗ ಕೆರೆಯ ವಿಸ್ತಾರ ಚಿಕ್ಕದಾಗಿದೆ. ಸುತ್ತಲಿನ ಬಡಾವಣೆಗಳ ಕೊಳಚೆ ನೀರು ಚರಂಡಿಗಳ ಮುಖಾಂತರ ನೇರವಾಗಿ ಈ ಕೆರೆಗೆ ಸೇರುವುದರಿಂದ ತ್ಯಾಜ್ಯದ ಗುಂಡಿಯಾಗಿಯೂ ಬದಲಾಗಿದೆ.
ಪಟ್ಟಣದ ಪಾಲಿಗೆ ಮಹತ್ವವಾಗಿರುವ ಈ ಕೆರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿ.ಜಿ.ಮಂಜುನಾಥ್ ಗುಂಡೂರಾವ್ ಕುಶಾಲನಗರ ಯೋಜನಾ ಪ್ರಾಕಾರದ ಅಧ್ಯಕ್ಷರಾಗಿದ್ದ ವೇಳೆ ಯೋಜನೆಯೊಂದನ್ನು ರೂಪಿಸಲಾಗಿತ್ತು. 1.80 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಕೆರೆಯ ಸಮಗ್ರ ಅಭಿವದ್ಧಿ ಮಾಡುವ ಮೂಲಕ ಪ್ರವಾಸಿ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನೀಲಿನಕ್ಷೆ ತಯಾರಿಸಲಾಗಿತ್ತು. ಕೆರೆ ಅಭಿವದ್ಧಿಗೆ ಬಳಕೆ ಮಾಡಲಾಗುವ ಮೊತ್ತದಲ್ಲಿ 50 ಲಕ್ಷ ರೂ.ಗಳನ್ನು ಯೋಜನಾ ಪ್ರಾಧಿಕಾರವೇ ಭರಿಸಲು ನಿರ್ಧರಿಸಲಾಗಿತ್ತು. ಇನ್ನುಳಿದ ಹಣವನ್ನು ಪ್ರವಾಸೋದ್ಯಮ ಇಲಾಖೆಯ ಅನುದಾನದಿಂದ ಬಳಸಿಕೊಳ್ಳುವ ಚಿಂತನೆ ನಡೆದಿತ್ತು.
ಇದೀಗ ತಾವರೆಕೆರೆ ಅಭಿವೃದ್ಧಿಯನ್ನು ಸಣ್ಣ ನೀರಾವರಿ ಇಲಾಖೆಗೆ ವಹಿಸಲಾಗಿದೆ. ರಾಜ್ಯದಲ್ಲಿ ಹೊಸ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿರುವ ಬೋಸರಾಜು ಅವರೇ ಜಿಲ್ಲಾ ಉಸ್ತುವಾರಿಯೂ ಆಗಿರುವ ಕಾರಣ ಸ್ಥಳೀಯರಲ್ಲಿ ತಾವರೆಕೆರೆ ಅಭಿವೃದ್ಧಿ ಬಗ್ಗೆ ಆಶಾಭಾವನೆ ಮೂಡಿದೆ.
ಏನೇನು ಆಗಬೇಕು?
-ಹೂಳು ತೆಗೆಯುವುದು
-ಪಾದಚಾರಿ ಮಾರ್ಗ ನಿರ್ಮಾಣ
-ವಿಶ್ರಾಂತಿ ಕುರ್ಚಿಗಳ ಅಳವಡಿಕೆ
-ಮಕ್ಕಳಿಗಾಗಿ ಆಟದ ಪಾರ್ಕ್
-ವೃದ್ಧರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಾಕಿಂಗ್ ಪಾಥ್
-ಬೋಟಿಂಗ್ ವ್ಯವಸ್ಥೆಕೃತಕ ದ್ವೀಪ ನಿರ್ಮಾಣ
-ಕೊಳಚೆ ನೀರು ಸೇರದಂತೆ ವ್ಯವಸ್ಥೆ
-ಅತಿಕ್ರಮಣ ಆಗದಂತೆ ಜಾಗದ ಸಂರಕ್ಷಣೆ
ಕೊಳಚೆ ನೀರು ಸೇರದಂತೆ ಕ್ರಮ ಅಗತ್ಯ
ಭಾರಿ ಪ್ರಮಾಣದಲ್ಲಿ ತ್ಯಾಜ್ಯ ನೀರು ಸೇರ್ಪಡೆ ತಾವರೆಕೆರೆಯ ದೊಡ್ಡ ಸಮಸ್ಯೆಯಾಗಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಸೊಳ್ಳೆ ಹಾವಳಿ ವಿಪರೀತವಾಗಿದ್ದು, ಹಗಲಿನಲ್ಲೂ ಓಡಾಡಲೂ ಅಸಾಧ್ಯದ ಸ್ಥಿತಿ ಇದೆ. ಹಾಗಾಗಿ, ಮೊದಲು ಕೊಳಚೆ ನೀರು ಸೇರದಂತೆ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
ಇಂಗುಗುಂಡಿಗಳ ನಿರ್ಮಾಣ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಸ್ಥಾಪನೆ ಮೂಲಕ ಸಮಸ್ಯೆಗೆ ಕಡಿವಾಣ ಹಾಕಬಹುದು. ಇಲ್ಲದಿದ್ದರೆ ಈ ಕೆರೆಯನ್ನು ಎಷ್ಟೇ ಅಭಿವೃದ್ಧಿ ಮಾಡಿದರೂ ವ್ಯರ್ಥ ಎನ್ನುವ ಭಾವನೆ ಸ್ಥಳೀಯರಲ್ಲಿದೆ. ಪ್ರಸ್ತುತ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವಾಗ ತಾವರೆಕೆರೆ ಅಭಿವದ್ಧಿಯನ್ನು ಪ್ರವಾಸೋದ್ಯಮ ಮೂಲಕ ಮಾಡಿಸಲು ಕುಶಾಲನಗರ ಕಾಂಗ್ರೆಸ್ ಮುಖಂಡರು ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ. ಕುಶಾಲನಗರ ಯೋಜನಾ ಪ್ರಾಧಿಕಾರದದಿಂದ ಆಗ ಪ್ರಯತ್ನ ನಡೆದಿತ್ತು. ಅಂದು ಪ್ರವಾಸೋದ್ಯಮ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಮೊದಲ ಕಂತಿನಲ್ಲಿ ಅನುದಾನ ಬಿಡುಗಡೆ ಮಾಡಿದ್ದರೂ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.
ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಅವರೊಂದಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ತಾವರೆಕೆರೆ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಶಾಸಕರು ಕೂಡ ಪೂರಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎನ್ನುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರೇ ಸಣ್ಣ ನೀರಾವರಿ ಸಚಿವರಾಗಿರುವುದರಿಂದ ವಿಶ್ವಾಸ ಇಮ್ಮಡಿಯಾಗಿದೆ. ಸದ್ಯದಲ್ಲೇ ಸಣ್ಣ ನೀರಾವರಿ ಇಲಾಖೆ ಮುಖಾಂತರ ನೀಲಿನಕ್ಷೆ ತಯಾರಿಸಿ ಅಗತ್ಯ ಕೆಲಸ ಮಾಡಿಸಲು ಚರ್ಚೆ ಆರಂಭವಾಗಿದೆ.
ಸುಸಜ್ಜಿತ ಪಾರ್ಕ್ ನಿರ್ಮಾಣದೊಂದಿಗೆ ಕುಶಾಲನಗರದವರೇ ಆದ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಪ್ರತಿಮೆ ಸ್ಥಾಪಿಸುವ ಚಿಂತನೆಯನ್ನು ಇಲ್ಲಿನ ಸಮಾನ ಮನಸ್ಕರು ಹೊಂದಿದ್ದಾರೆ. ಅಂದುಕೊಂಡಂತೆ ಎಲ್ಲ ಕೆಲಸವೂ ನಡೆದಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ತಾವರೆಕೆರೆ ಕೂಡ ದೊಡ್ಡ ಕೊಡುಗೆ ನೀಡುವುದು ಖಚಿತ. ಆದರೆ ನಾವು ಕಷ್ಟಪಟ್ಟು ತಂದ ಅನುದಾನವನ್ನು ಬೇರೆಡೆಗೆ ಬಳಸುವ ಮೂಲಕ ಪ್ರವಾಸೋದ್ಯಮ ಇಲಾಖೆ ಕುಶಾಲನಗರಕ್ಕೆ ಮೋಸ ಮಾಡಿದೆ. ಇನ್ನು ಮುಂದೆ ಅಂತಹ ಅಚಾತುರ್ಯ ಆಗದಂತೆ ಎಚ್ಚರ ವಹಿಸಲಾಗುವುದು.
ಬಿ.ಜಿ.ಮಂಜುನಾಥ್ ಗುಂಡೂರಾವ್, ಮಾಜಿ ಅಧ್ಯಕ್ಷ, ಕುಶಾಲನಗರ ನಗರ ಯೋಜನಾ ಪ್ರಾಕಾರ
ಕುಶಾಲನಗರ ಸೇರಿದಂತೆ ಜಿಲ್ಲಾದ್ಯಂತ ಕೆರೆಗಳು ಒತ್ತುವರಿಯಾಗಿವೆ. ತಾವರೆಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಿದಲ್ಲಿ ಒತ್ತುವರಿ ಆಗುತ್ತಿರಲಿಲ್ಲ. ಕೊಳಚೆ ನೀರು ಹರಿದು ಬರುವುದಕ್ಕೂ ಕಡಿವಾಣ ಹಾಕಿದಂತಾಗುತ್ತಿತ್ತು.
ಎಚ್.ಎಸ್. ಅಶೋಕ ಮಾಜಿ ಅಧ್ಯಕ್ಷ, ಕೊಡಗು ಜಿ.ಪಂ.