ವಿಜಯವಾಣಿ ವಿಶೇಷ ಗದಗ
ಸರ್ಕಾರ ಗದಗ-ಬೆಟಗೇರಿ ನಗರಸಭೆ ವಾರ್ಡ್ಗಳ ಮೀಸಲಾತಿ ಹಂಚಿಕೆ ಮಾಡಿರುವ ಕ್ರಮ ಅವೈಜ್ಞಾನಿಕವಾಗಿದೆ ಎಂದು ಪ್ರಶ್ನಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿರುವ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ನಗರಸಭೆಗೆ ಚುನಾವಣೆ ನಡೆಯುವ ಕಾಲ ಸನ್ನಿಹಿತವಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆ ಜತೆಗೆ ಗದಗ-ಬೆಟಗೇರಿ ನಗರಸಭೆಗೂ ಚುನಾವಣೆ ನಡೆಯಬಹುದು ಎಂಬ ಮಾತಿದೆ.
ಈ ಕುರಿತು ಈಗಾಗಲೇ ರಾಜ್ಯ ಚುನಾವಣಾ ಆಯೋಗವು ಸೆ. 29ರಂದು ಜಿಲ್ಲಾಧಿಕಾರಿಗೆ ಪತ್ರ ಕಳಿಸಿದ್ದು, ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣವನ್ನು ದಾವೆದಾರರು ಹಿಂಪಡೆದಿದ್ದಾರೆ. ಹೀಗಾಗಿ, ನಗರಸಭೆಗೆ ಚುನಾವಣೆ ನಡೆಸಬೇಕಾಗಿದ್ದು, ವಾರ್ಡ್ವಾರು ಮತದಾರರ ಪಟ್ಟಿಯನ್ನು ತಯಾರಿಸಬೇಕು ಎಂದು ಸೂಚನೆ ನೀಡಿದೆ.
ಕಳೆದ ವರ್ಷ ಆಗಸ್ಟ್ ಅಂತ್ಯಕ್ಕೆ ನಗರಸಭೆ ಸದಸ್ಯರ ಆಡಳಿತ ಅವಧಿ ಕೊನೆಗೊಂಡಿತು. ಆ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ನಗರಸಭೆಗೆ ಹೊಸ ಮೀಸಲಾತಿ ನಿಗದಿಪಡಿಸಿ ಘೋಷಣೆ ಮಾಡಿತು. ಸರ್ಕಾರ ನಿಗದಿಪಡಿಸಿರುವ ಮೀಸಲಾತಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ನಗರಸಭೆ ಮಾಜಿ ಸದಸ್ಯ ಮಂಜುನಾಥ ಎಚ್.ಮುಳಗುಂದ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇತ್ತೀಚೆಗೆ ಅವರು ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ. ಹೀಗಾಗಿ ಕಳೆದ 10 ದಿನಗಳಿಂದ ಗದಗ-ಬೆಟಗೇರಿ ಅವಳಿನಗರದಲ್ಲಿ ಚುನಾವಣೆಯ ಗಾಳಿ ಬೀಸತೊಡಗಿದೆ.
ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಘೋಷಣೆ: ಬಿಜೆಪಿ ಸರ್ಕಾರ ನಗರಸಭೆ ಮತ್ತು ಮತ್ತು ಪುರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಘೋಷಣೆ ಮಾಡಿದ್ದರಿಂದ ಕಣ ಮತ್ತಷ್ಟು ರಂಗೇರತೊಡಗಿದೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದರಿಂದ ಸ್ಪರ್ಧಾಕಾಂಕ್ಷಿಗಳು ಟಿಕೆಟ್ಗಾಗಿ ಮುಖಂಡರ ಮನವೊಲಿಕೆ ಆರಂಭಿಸಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಬದಲಾವಣೆ ಮಾಡಬೇಕು ಎಂದು ಪ್ರಯತ್ನವೂ ನಡೆದಿದೆ. ಕಳೆದ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾಗಿತ್ತು.
ವಾರ್ಡ್ವಾರು ಮೀಸಲಾತಿ ವಿವರ: ವಾರ್ಡ್ 1- ಹಿಂದುಳಿದ ವರ್ಗ ಅ ಮಹಿಳೆ, ವಾರ್ಡ್ 2- ಪರಿಶಿಷ್ಟ ಜಾತಿ, ವಾರ್ಡ್ 3- ಹಿಂದುಳಿದ ವರ್ಗ ಎ, ವಾರ್ಡ್ 4- ಸಾಮಾನ್ಯ, ವಾರ್ಡ್ 5- ಸಾಮಾನ್ಯ ಮಹಿಳೆ, ವಾರ್ಡ್ 6- ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ 7- ಸಾಮಾನ್ಯ ಮಹಿಳೆ, ವಾರ್ಡ್ 8- ಹಿಂದುಳಿದ ವರ್ಗ ಎ ಮಹಿಳೆ, ವಾರ್ಡ್ 9- ಸಾಮಾನ್ಯ ಮಹಿಳೆ, ವಾರ್ಡ್ 10- ಹಿಂದುಳಿದ ವರ್ಗ ಬ ಮಹಿಳೆ, ವಾರ್ಡ್ 11 ಸಾಮಾನ್ಯ ಮಹಿಳೆ, ವಾರ್ಡ್ 12- ಸಾಮಾನ್ಯ ಮಹಿಳೆ, ವಾರ್ಡ್ 13- ಸಾಮಾನ್ಯ, ವಾರ್ಡ್ 14- ಸಾಮಾನ್ಯ ಮಹಿಳೆ, ವಾರ್ಡ್ 15- ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿದೆ. ವಾರ್ಡ್ 16- ಸಾಮಾನ್ಯ, ವಾರ್ಡ್ 17- ಸಾಮಾನ್ಯ, ವಾರ್ಡ್ 18- ಹಿಂದುಳಿದ ವರ್ಗ ಅ, ವಾರ್ಡ್ 19- ಸಾಮಾನ್ಯ, ವಾರ್ಡ್ 20- ಸಾಮಾನ್ಯ ಮಹಿಳೆ, ವಾರ್ಡ್ 21- ಹಿಂದುಳಿದ ವರ್ಗ ಅ, ವಾರ್ಡ್ 22- ಹಿಂದುಳಿದ ವರ್ಗ ಬ, ವಾರ್ಡ್ 23- ಹಿಂದುಳಿದ ವರ್ಗ ಅ, ವಾರ್ಡ್ 24- ಪರಿಶಿಷ್ಟ ಪಂಗಡ, ವಾರ್ಡ್ 25- ಸಾಮಾನ್ಯ ಮಹಿಳೆ, ವಾರ್ಡ್ 26- ಹಿಂದುಳಿದ ವರ್ಗ ಅ ಮಹಿಳೆ, ವಾರ್ಡ್ 27- ಸಾಮಾನ್ಯ, ವಾರ್ಡ್ 28- ಹಿಂದುಳಿದ ವರ್ಗ ಅ ಮಹಿಳೆ, ವಾರ್ಡ್ 29- ಪರಿಶಿಷ್ಟ ಜಾತಿ, ವಾರ್ಡ್ 30- ಸಾಮಾನ್ಯ ಮಹಿಳೆ, ವಾರ್ಡ್ 31- ಸಾಮಾನ್ಯ, ವಾರ್ಡ್ 32- ಹಿಂದುಳಿದ ವರ್ಗ ಅ, ವಾರ್ಡ್ 33- ಸಾಮಾನ್ಯ, ವಾರ್ಡ್ 34- ಸಾಮಾನ್ಯ, ವಾರ್ಡ್ 35- ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ.