ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಭಾಗದಲ್ಲಿನ ರಸ್ತೆಗಳು, ಬೈಪಾಸ್ ರಸ್ತೆಗಳು ಹಾಗೂ ಹೆದ್ದಾರಿಗಳ ಕಾಮಗಾರಿ ಚುರುಕುಗೊಳಿಸುವಂತೆ ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಹುಬ್ಬಳ್ಳಿ- ಧಾರವಾಡ ಭಾಗದ ಕೆ.ಆರ್.ಡಿ.ಸಿ.ಎಲ್., ರಾಷ್ಟ್ರೀಯ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಅಡಿ ಅನುಷ್ಠಾನಗೊಳಿಸುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ಕರೆದಿದ್ದ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹಾಗೂ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು, ಕಾಮಗಾರಿಗಳಿಗೆ ಚುರುಕು ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನು 6 ಲೇನ್ಗೆ ಉನ್ನತೀಕರಿಸುವ ಕಾಮಗಾರಿ ಪ್ರಾರಂಭವಾಗದಿರುವುದಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದರು.
ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಕಾಮಾಗಾರಿ ಪ್ರಾರಂಭಿಸಲು ಅನಗತ್ಯ ವಿಳಂಬವಾಗುತ್ತಿದೆ. ಈಗಾಗಲೇ ಉದ್ಯಮಿ ಅಶೋಕ ಖೇಣಿ ಅವರೊಂದಿಗೆ ರ್ಚಚಿಸಿ ಕಾಮಗಾರಿ ಪ್ರಾರಂಭದ ಬಗ್ಗೆ ಇದ್ದ ಗೊಂದಲ ಸರಿಪಡಿಸಲಾಗಿದೆ. ಆದರೂ ಇದುವರೆಗೆ ಕಾಮಗಾರಿ ಪ್ರಾರಂಭಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಸ್ಯೆ ಇಲ್ಲದ ಹಾಗೂ ತುರ್ತು ಕಾಮಗಾರಿಗಳನ್ನು ಪ್ರಾರಂಭಿಸಲು ಸಾಧ್ಯವಿರುವ ಕಡೆ ತಡ ಮಾಡದೇ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ನವಲಗುಂದ ಹಾಗೂ ನರಗುಂದ ಬೈಪಾಸ್ ರಸ್ತೆಗಳ ಸಂಬಂಧಿತ ಕೆಲಸಗಳನ್ನು ಚುರುಕುಗೊಳಿಸುವಂತೆ ಸೂಚನೆ ನೀಡಲಾಯಿತು.
ಮುಂದಿನ ವಾರ ಉದ್ಯಮಿ ಅಶೋಕ ಖೇಣಿ ಅವರೊಂದಿಗೆ ಸಭೆ ನಡೆಸುವಂತೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ ಗೋಯಲ್ ಅವರಿಗೆ ನಿರ್ದೇಶನ ನೀಡಲಾಯಿತು. ಮುಂದಿನ ಶುಕ್ರವಾರ ಈ ಬಗ್ಗೆ ಆಗಿರುವ ಪ್ರಗತಿಯನ್ನು ತಿಳಿಯುವ ನಿಟ್ಟಿನಲ್ಲಿ ವಿಡಿಯೋ ಕಾನ್ಪರೆನ್ಸ್ ಆಯೋಜಿಸಲು ನಿರ್ಧರಿಸಲಾಯಿತು.
ಶಾಸಕರಾದ ಅರವಿಂದ ಬೆಲ್ಲದ, ಶಂಕರ ಪಾಟೀಲ ಮುನೇನಕೊಪ್ಪ, ಲೋಕೋಪಯೋಗಿ ಇಲಾಖೆ, ಕೆ.ಆರ್.ಡಿ.ಸಿ.ಎಲ್. ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಪ್ರಮುಖ ಅಧಿಕಾರಿಗಳು ಹಾಜರಿದ್ದರು.