ಅರಕಲಗೂಡು: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನನ್ನ ಅವಧಿಯಲ್ಲಿ ಮಂಜೂರಾದದ್ದು ಎಂಬ ಮಾಜಿ ಸಚಿವ ಎ. ಮಂಜು ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು ಯಾವುದೇ ಹುರುಳಿಲ್ಲ. ಇದು ಮಾಜಿ ಸಚಿವರಾದ ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಶಾಸಕ ಎ.ಟಿ. ರಾಮಸ್ವಾಮಿ ತಿರುಗೇಟು ನೀಡಿದರು.
ಎ. ಮಂಜು ಅವರ ಅವಧಿಯಲ್ಲಿ ಮಂಜೂರಾಗಿದ್ದರೆ ಏಕೆ ಅನುಷ್ಠಾನಗೊಳಿಸಲಿಲ್ಲ. ಈ ವರೆಗೆ ಈ ಕುರಿತು ಚಕಾರ ಎತ್ತದ ಇವರು ಶಂಕು ಸ್ಥಾಪನೆಗೆ ಹೊರಟಾಗ ಸುಳ್ಳು ಸುದ್ದಿ ಹಬ್ಬಿಸುವುದು ನ್ಯಾಯಸಮ್ಮತವಲ್ಲ, ಇವರ ಅವಧಿಯಲ್ಲಿ ಯೋಜನೆ ಮಂಜೂರಾಗಿದೆ ಎಂಬುದಕ್ಕೆ ಆದೇಶದ ಸಣ್ಣ ತುಣುಕು ನೀಡಿದರೂ ಅವರಿಗೆ ನಾನು ಆಭಾರಿಯಾಗಿರುತ್ತೇನೆ. ಈ ಕುರಿತು ಆವರಿಗೂ ಅರಿವಿದೆ, ಆದರೆ ರಾಜಕೀಯಕ್ಕಾಗಿ ಈ ರೀತಿಯ ತಪ್ಪು ಸಂದೇಶಗಳನ್ನು ನೀಡುವುದು ತರವಲ್ಲ. ಇವರ ಅವಧಿಯಲ್ಲಿ ಯೋಜನೆ ಮಂಜೂರಾಗಿದ್ದಕ್ಕೆ ದಾಖಲೆ ನೀಡಿದರೆ ನಾನೇ ಈ ಕುರಿತು ಪ್ರಚಾರ ಮಾಡುತ್ತೇನೆ, ಇದರ ಕೀರ್ತಿಯನ್ನು ಅವರೇ ಪಡೆದುಕೊಳ್ಳಲಿ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಹುಗ್ರಾಮ ಕುಡಿಯುವ ನೀರಿನ ಮೂರು ಯೋಜನೆಗಳಿಗೆ 2022 ಜನವರಿ ತಿಂಗಳಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತು ಫೆಬ್ರವರಿ ತಿಂಗಳಲ್ಲಿ ಸರ್ಕಾರಿ ಆದೇಶವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಟೆಂಡರ್ ಅನುಮೋದನೆಯಾಗಿದೆ ಎಂದು ತಿಳಿಸಿ ದಾಖಲೆಗಳನ್ನು ಪ್ರದರ್ಶಿಸಿದರು. ತಾಲ್ಲೂಕಿನಲ್ಲಿ ಯಾವುದೆ ಕಾಮಗಾರಿ ಕೈಗೊಂಡರೂ ಅದು ನನ್ನ ಕಾಲದಲ್ಲೆ ಆಗಿದ್ದು ಎಂದು ಹೇಳುತ್ತಾರೆ. ಇವರ ಅವಧಿಯಲ್ಲಿ ಆಗಿದ್ದರೆ ಕಾಮಗಾರಿಯನ್ನು ಅನುಷ್ಠಾನಕ್ಕೆ ಏಕೆ ತರಲ್ಲಿಲ್ಲ ಎಂದು ಪ್ರಶ್ನಿಸಿದರು.